Sunday, December 10, 2023

Latest Posts

ಆನೆ ಹಾವಳಿ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕ್ರಮ ಯಶಸ್ವಿ: ಶಾಸಕ ಸಿಮೆಂಟ್‌ ಮಂಜು

ಹೊಸದಿಗಂತ ವರದಿ ಆಲೂರು:

ತಾಲ್ಲೂಕಿನ ಕೆಲವು ಭಾಗದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಈ ಭಾಗದಲ್ಲಿ ಕಾಡಾನೆಗಳ ಉಪಟಳ ಕಡಿಮೆಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಆಲೂರು ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿ ಪುರಭೈರವನಹಳ್ಳಿ ಗ್ರಾಮದಲ್ಲಿ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹಲವು ವರ್ಷಗಳಿಂದಲೂ ತಾಲ್ಲೂಕಿನ ಕೆ.ಹೊಸಕೋಟೆ ಹಾಗೂ ಕುಂದೂರು ಹೋಬಳಿಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ಈ ಭಾಗದಲ್ಲಿ ಹಾಕಿದ ಬೆಳೆಯನ್ನು ತೆಗೆದುಕೊಳ್ಳಲು ಸಾದ್ಯವಾಗುತ್ತಿರಲಿಲ್ಲ. ಅಲ್ಲದೆ ಕಾಡಾನೆ ದಾಳಿಗೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳ ಪ್ರವೇಶ ನಿಯಂತ್ರಣಕ್ಕೆ ಸಾಕಷ್ಟು ಶ್ರಮ ಹಾಕಿದ್ದು,  ಇದುವರೆಗೂ ಕಾಡಾನೆಗಳ ನಿಯಂತ್ರಣ ಸಾದ್ಯವಾಗಿರಲಿಲ್ಲ. ಕಾಡಾನೆಗಳು ಹೆಚ್ಚು ಓಡಾಡುವ ಸ್ಥಳಗಳನ್ನು ಗುರುತಿಸಿ ಅಂತಹ ಸ್ಥಳಗಳಿಗೆ ರೈಲ್ವೇ ಹಳಿ ಅಳವಡಿಸಲು ಅದೇಶ ನೀಡಲಾಗಿತ್ತು. ಈಗಾಗಲೇ ತಾಲ್ಲೂಕಿನ ಕೆಲವು ಭಾಗದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಲಾಗಿದೆ. ಅಂತಹ ಭಾಗದಲ್ಲಿ ಕಾಡಾನೆಗಳಿಂದ ಆಗುತ್ತಿರುವ ಉಪಟಳ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ನಾನು ಕಳೆದ ವಿಧಾನಸಭೆ ಅದಿವೇಶನದಲ್ಲಿ ಕಾಡಾನೆ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದ್ದೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಬಜೆಟ್‌ ನಲ್ಲಿ 100 ಕೋಟಿ ಅನುದಾನ ಮೀಸಲು:

ರೈಲ್ವೇ ಬ್ಯಾರಿಕೇಡ್ ಅಳವಡಿಕೆಯಿಂದ ಕಾಡಾನೆ ಪ್ರವೇಶ ನಿಯಂತ್ರಣ ಕಡಿಮೆಯಾಗಿರುವ ಬಗ್ಗೆ ಸರ್ಕಾರದ ಗಮನದಲ್ಲಿದ್ದು, ರೈಲ್ವೇ ಬ್ಯಾರಿಕೇಡ್ ಅಳವಡಿಕೆಯಿಂದ ಸ್ವಲ್ಪ ಮಟ್ಟಿನ ಸಮಸ್ಯೆ ಬಗೆಹರಿಸಬಹುದು ಎನ್ನುವ ಉದ್ದೇಶದಿಂದ 100 ಹಣ ಮೀಸಲಿಟ್ಟಿದೆ. ಆ ಹಣವು ಸಂಪೂರ್ಣವಾಗಿ ಹಾಸನ ಜಿಲ್ಲೆಗೆ ಬಳಕೆಯಾಗಲಿದ್ದು. ಬ್ಯಾರಿಕೇಡ್ ಅಳವಡಿಕೆಯನ್ನು ವಿಸ್ತರಿಸಲಾಗುವುದು. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚು ಆನೆಗಳು ಓಡಾಡುವ ಸ್ಥಳಗಳನ್ನು ಗುರುತಿಸುವಂತೆ ಸೂಚಿಸಿದ್ದೇನೆ.

ಕಾಡಾನೆ ಉಪಟಳ ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ಮಂತ್ರಿಗಳು ಹಾಗೂ ರಾಜ್ಯ ಮಟ್ಟದ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೂವಯ್ಯ,ಗಂಗಣ್ಣ ಭರತೂರು,ಬಿಜೆಪಿ ಮುಖಂಡ ರಂಗಸ್ವಾಮಿ ಪುರಭೈರವನಹಳ್ಳಿ, ಶಶಿಧರ್, ದಿನೇಶ್, ಧರಣಿ, ಚೇನ್, ಹರೀಶ್, ಹಾಗೂ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!