ಅಂತರ್ಜಲ, ಜಲಸ್ಥರಗಳು ನಮ್ಮ ಆಸ್ತಿ : ಮಳೆನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿ

ದಿಗಂತ ವರದಿ ಚಿತ್ರದುರ್ಗ:

ಅಂತರ್‌ಜಲ ಜಲಸ್ಥರಗಳು ನಮ್ಮ ಆಸ್ತಿಯಾಗಿದ್ದು, ಕೊಳವೆಬಾವಿ ಕೊರೆಯುವ ಮೂಲಕ ಐವತ್ತು ವರ್ಷಗಳಲ್ಲಿ ಕೋಟ್ಯಾಂತರ ಜಲಸ್ಥರಗಳನ್ನು ಬರಿದು ಮಾಡಿದ್ದೇವೆಂದು ಮಳೆನೀರು ಕೊಯ್ಲು ತಜ್ಞ ಹಾಗೂ ರಾಜ್ಯ ಯೋಜನಾ ಮಂಡಳಿ ಸದಸ್ಯ ಎನ್.ಜೆ.ದೇವರಾಜರೆಡ್ಡಿ ಅಭಿಪ್ರಾಯಪಟ್ಟರು.
ನೆಹರು ಯುವ ಕೇಂದ್ರ, ಶ್ರೀ ಆದರ್ಶ ಯುವಕ / ಯುವತಿ ಸಂಘ, ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ, ಯುವ ರೆಡ್‌ಕ್ರಾಸ್ ಘಟಕ, ರೋಟರಿ ಕ್ಲಬ್ ಚಿನ್ಮುಲಾದ್ರಿ, ಐಕ್ಯೂ.ಎ.ಸಿ. ವಿಭಾಗ ಇವರುಗಳ ಸಹಯೋಗದೊಂದಿಗೆ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಲಜಾಗರಣ ಅಭಿಯಾನ ಕುರಿತು ಯುವ ಜನರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಇಲ್ಲಿಯವರೆಗೂ ನಾಲ್ಕು ಕೋಟಿಗೂ ಅಧಿಕ ಕೊಳವೆಬಾವಿಗಳನ್ನು ಕೊರೆದು ವರ್ಷಕ್ಕೆ ೨೫೦ ಮಿಲಿಯನ್ ಕ್ಯೂಬಿಕ್ ಕಿ.ಮೀ. ವಾರ್ಷಿಕ ನೀರನ್ನು ಪಂಪ್‌ಗಳ ಮೂಲಕ ಮೇಲೆತ್ತಲಾಗುತ್ತಿದೆ. ರಾಜಸ್ಥಾನದ ನಂತರ ಕರ್ನಾಟಕ ಎರಡನೆ ಅತಿ ದೊಡ್ಡ ಮರಭೂಮಿ ಹೊಂದುವ ಲಕ್ಷಣಗಳಿದ್ದು, ಅಂತರ್‌ಜಲ ಮರುಭರ್ತಿಗೆ ಜನಸಾಮಾನ್ಯರು ಯುದ್ದೋಪಾದಿಯಲ್ಲಿ ಸನ್ನದ್ದರಾಗಬೇಕೆಂದು ಕರೆ ನೀಡಿದರು.
ಕೊಳವೆಬಾವಿಯಿಂದ ನೀರು ಮೇಲಕ್ಕೆತ್ತುವಾಗ ಇರುವಷ್ಟು ಆಸಕ್ತಿ ಮರುಭರ್ತಿಗೆ ಇರುವುದಿಲ್ಲ ಎಂದು ವಿಷಾಧಿಸಿದ ಎನ್.ಜೆ.ದೇವರಾಜರೆಡ್ಡಿ ಪ್ರಸ್ತುತ ಜಲಸಾಕ್ಷರತೆ ಅತ್ಯಮೂಲ್ಯವಾಗಿದ್ದು, ಪಠ್ಯಗಳ ಮೂಲಕ ಮುಂದಿನ ಪೀಳಿಗೆಗೆ ಮಳೆ ನೀರಿನ ಮಹತ್ವ ತಿಳಿಸುವುದು ಅನಿವಾರ್ಯವಾಗಿದೆ. ಬಜೆಟ್‌ನಲ್ಲಿ ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಅಂತರ್‌ಜಲ ಭೂವಿಜ್ಞಾನಿ ಕೆ.ಎಂ.ಪುನಿತ್ ಮಾತನಾಡಿ, ಯುವಶಕ್ತಿ ಶಕ್ತಿ ಮೀರಿ ಮಳೆನೀರು ಮತ್ತು ನೀರು ಮರುಬಳಕೆ ಕುರಿತು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕಿದೆ ಎಂದರು. ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎನ್.ಸುಹಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಮಳೆ ನೀರನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಹಿಡಿದಿಟ್ಟುಕೊಂಡು ಮುಂದಿನ ಪೀಳಿಗೆಗೆ ಮಳೆ ನೀರಿನ ಮಹತ್ವ ತಿಳಿಸಬೇಕಿದೆ ಎಂದರು.
ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಈ.ರುದ್ರಮುನಿ ಅಧ್ಯಕ್ಷತೆ ವಹಿಸಿದ್ದರು. ಗಾಯತ್ರಿ ಶಿವರಾಂ, ಉಪನ್ಯಾಸಕ ಆರ್.ಎಸ್.ರಾಜು, ಎಂ.ವಿ.ಗೋವಿಂದರಾಜು, ಈ.ಅರುಣ್‌ಕುಮಾರ್, ಶ್ರೀನಿವಾಸ್ ಮಳಲಿ ವೇದಿಕೆಯಲ್ಲಿದ್ದರು.
ಭವಾನಿ ಪ್ರಾರ್ಥಿಸಿದರು. ದಿವ್ಯ ಡಿ. ವಂದಿಸಿದರು, ಉಪನ್ಯಾಸಕ ನಾಗಭೂಷಣ್‌ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!