ಹೊಸದಿಗಂತ ವರದಿ, ಕೊಡಗು:
ಮಳೆಗಾಲ ಆರಂಭಗೊಳ್ಳಲು ಇನ್ನು ಕೇವಲ ನಾಲ್ಕು ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಆಸಕ್ತಿ ತೋರದ ಮಡಿಕೇರಿ ನಗರಸಭೆ ಗಾಢ ನಿದ್ರೆಯಲ್ಲಿದೆ ಎಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಅವರು, ಅಧಿಕಾರಿಗಳ ಹಿಡಿತದಲ್ಲಿದ್ದ ನಗರಸಭೆಯಲ್ಲಿ ಜನಪ್ರತಿನಿಧಿಗಳ ಅಧಿಕಾರ ಆರಂಭಗೊಂಡಿದ್ದರೂ ಅಭಿವೃದ್ಧಿ ಕಾರ್ಯಗಳು ಇನ್ನೂ ಆರಂಭಗೊಂಡಿಲ್ಲ. ಕನಿಷ್ಟ ಚರಂಡಿಗಳ ಸ್ವಚ್ಛತಾ ಕಾರ್ಯ ಕೂಡಾ ನಡೆಯುತ್ತಿಲ್ಲವೆಂದು ಟೀಕಿಸಿದ್ದಾರೆ.
ನಗರದ 23 ವಾರ್ಡ್‍ಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಕಾಡುತ್ತಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಸದಸ್ಯರನ್ನು ಹೊರತು ಪಡಿಸಿದರೆ ಉಳಿದ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಎಲ್ಲಾ ಬಡಾವಣೆಗಳ ರಸ್ತೆಗಳು ಗುಂಡಿಮಯವಾಗಿವೆ. ಚರಂಡಿಗಳನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ. ವಿದ್ಯುತ್ ದೀಪಗಳಿಲ್ಲ, ಅಪಾಯಕಾರಿ ಪ್ರದೇಶದಲ್ಲಿ ತಡೆಗೋಡೆಗಳಿಲ್ಲ, ಬೀಡಾಡಿ ಹಸುಗಳು, ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಆದರೆ ನಗರಸಭೆ ಮಾತ್ರ ನಗರ ಸುಭಿಕ್ಷವಾಗಿದೆ ಎನ್ನುವ ಭ್ರಮೆಯಲ್ಲಿ ಕಾಲಹರಣ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಗರದ ವಿವಿಧೆಡೆ ಅಶುಚಿತ್ವದ ವಾತಾವರಣವಿದೆ, ಸಮಪರ್ಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬಂದಿದ್ದು, ಕಸ ಸಂಗ್ರಹಿಸುವ ವಾಹನಗಳು, ನಿವಾಸಿಗಳು ಕಚೇರಿಗೆ ತೆರಳಿದ ನಂತರ ಬರುತ್ತಿವೆ. ಕೆಲವು ವರ್ಷಗಳ ಹಿಂದೆ ಮನೆ ಮನೆ ಕಸ ಸಂಗ್ರಹಕ್ಕಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ನೂತನ ಟಿಪ್ಪರ್’ಗಳನ್ನು ಖರೀದಿಸಲಾಗಿದೆ. ಆದರೆ ಇಂದು ಬೆರಳೆಣಿಕೆಯಷ್ಟು ವಾಹನಗಳು ಕಸ ವಿಲೇವಾರಿ ಮಾಡುತ್ತಿವೆ ಎಂದು ಪಾರ್ವತಿ ಅವರು ದೂರಿದ್ದಾರೆ.
ನಗರದ ಕೈಗಾರಿಕಾ ಬಡಾವಣೆಯಲ್ಲಿ ಚರಂಡಿಗಳು ಸಂಪೂರ್ಣವಾಗಿ ಹೂಳು ತುಂಬಿದ್ದು, ಮಳೆಗಾಲದಲ್ಲಿ ಮತ್ತೆ ಅಪಾಯ ಎದುರಾಗಲಿದೆ. ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿಗಳು ಪರದಾಡುತ್ತಿದ್ದಾರೆ. ಪತ್ರಿಕಾ ಭವನದ ಬಳಿಯ ಸುಲಭ್ ಶೌಚಾಲಯವನ್ನು ಉದ್ಘಾಟನೆ ಮಾಡಿದ ದಿನವೇ ಬೀಗ ಜಡಿಯುವ ಮೂಲಕ ನಗರಸಭೆ ತನ್ನ ಆಡಳಿತ ವೈಖರಿಯನ್ನು ಸಾಕ್ಷೀಕರಿಸಿದೆ ಎಂದು ಅವರು ಟೀಕಿಸಿದ್ದಾರೆ.
ನಗರಸಭೆಯ ಆಡಳಿತದಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ಅಧಿಕಾರಿ ವರ್ಗಕ್ಕೆ ಅಭಿವೃದ್ಧಿಯ ಬಗ್ಗೆ ಆಸಕ್ತಿ ಇಲ್ಲದಾಗಿದೆ. ಚುನಾಯಿತ ಸದಸ್ಯರು ತಕ್ಷಣ ಕಾರ್ಯೋನ್ಮುಖವಾಗುವ ಮೂಲಕ ಜನಪರ ಕಾರ್ಯಗಳಿಗೆ ಚಾಲನೆ ನೀಡಬೇಕು. ಮಳೆಗಾಲ ಆರಂಭವಾದ ನಂತರ ಮಳೆಗಾಲದ ನೆಪವೊಡ್ಡಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದ ನಗರಸಭೆ ತಕ್ಷಣ ಈಗಿನಿಂದಲೇ ಕಾಮಗಾರಿಗಳನ್ನು ಆರಂಭಿಸಿ ಮಳೆಗಾಲದೊಳಗೆ ಪೂರ್ಣಗೊಳಿಸಬೇಕು ಮತ್ತು ಗಣಪತಿ ಬೀದಿ ರಸ್ತೆ ವಿಸ್ತರಣೆ ಕಾರ್ಯ ಚುರುಕುಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.