100 ಟಿಬಿ ರೋಗಿಗಳನ್ನು ದತ್ತು ಪಡೆದ ರಾಜಭವನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಟಿಬಿ ಮುಕ್ತ ಭಾರತಕ್ಕಾಗಿ ದೇಶದ ಪ್ರಧಾನಿಯವರು ಬದ್ಧತೆಯನ್ನು ತೋರಿಸಿದ್ದು, ಇದಕ್ಕಾಗಿ ಸಾರ್ವಜನಿಕ ಸಹಭಾಗಿತ್ವಕ್ಕೆ ಕರೆ ನೀಡಿದ್ದಾರೆ. ಪ್ರಧಾನಮಂತ್ರಿಯವರ ಟಿಬಿ ಮುಕ್ತ ಭಾರತ ಅಭಿಯಾನವನ್ನು ಜನಾಂದೋಲನವನ್ನಾಗಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹೆಲ್ತ್ ಮಿಷನ್, ಕರ್ನಾಟಕ ಟಿಬಿ ಘಟಕ ಮತ್ತು ರಾಜಭವನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕ್ಷಯ ರೋಗಿಗಳ ದತ್ತು ಪಡೆಯುವ ಮತ್ತು ನಿಕ್ಷಯ ಮಿತ್ರ(ದಾನಿಗಳ) ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಪಂಚದ ಅನೇಕ ದೇಶಗಳು 2030 ರ ವೇಳೆಗೆ ಟಿಬಿಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿವೆ. 2025 ರ ವೇಳೆಗೆ ಭಾರತವನ್ನು ಟಿಬಿ ಮುಕ್ತ ಮಾಡುವ ಗುರಿಯನ್ನು ಭಾರತದ ಪ್ರಧಾನಿ ಹೊಂದಿದ್ದಾರೆ. ಅದಕ್ಕಾಗಿ ರಾಜ್ಯವು ‘ಕ್ಷಯ ಮುಕ್ತ ಕರ್ನಾಟಕ – 2025’ ಗಾಗಿ ಈ ಪ್ರಮುಖ ಯೋಜನೆಯನ್ನು ಅಳವಡಿಸಿಕೊಂಡಿದೆ ಎಂದರು.
‘ನಿ-ಕ್ಷಯ 2.0’ ಪೋರ್ಟಲ್ ಮೂಲಕ ಟಿಬಿ ರೋಗಿಗಳಿಗೆ ಸಮುದಾಯದ ಸಹಭಾಗಿತ್ವವನ್ನು ಒದಗಿಸುವ ಉಪಕ್ರಮವು ಶ್ಲಾಘನೀಯ. ಈ ಪೋರ್ಟಲ್‌ನಲ್ಲಿ ಸುಮಾರು 13.5 ಲಕ್ಷ ಕ್ಷಯ ರೋಗಿಗಳು ನೋಂದಾಯಿಸಿಕೊಂಡಿದ್ದಾರೆ, ಅವರಲ್ಲಿ 89 ಲಕ್ಷ ಸಕ್ರಿಯ ಟಿಬಿ ರೋಗಿಗಳು ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಗುರುತಿಸಲಾದ 39745 ಟಿಬಿ ರೋಗಿಗಳಲ್ಲಿ 25895 ರೋಗಿಗಳು ಪೋಶನ್ ಆಧಾರ್‌ಗೆ ಒಪ್ಪಿಗೆ ನೀಡಿದ್ದಾರೆ, ಅವರಲ್ಲಿ 25110 ರೋಗಿಗಳನ್ನು ಅನೇಕ ಸಾಮಾಜಿಕ ಸಂಸ್ಥೆಗಳು, ಸಾರ್ವಜನಿಕ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಮತ್ತು ಇತರ ವ್ಯಕ್ತಿಗಳಿಂದ ದತ್ತು ಪಡೆದಿದ್ದಾರೆ. ಈ ಅನುಕ್ರಮದಲ್ಲಿ, 100 ಟಿಬಿ ರೋಗಿಗಳನ್ನು ರಾಜಭವನದಿಂದ ದತ್ತು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟಿಬಿ ರೋಗಿಗಳನ್ನು ದತ್ತು ಪಡೆದ ಸಂಸದರಾದ ಲೆಹರ್ ಸಿಂಗ್ ಸಿರೋಯಾ, ಸಚಿವರಾದ ಗೋಪಾಲಯ್ಯ ಅವರ ಪತ್ನಿ ಎಸ್.ಪಿ. ಹೆಮಲತಾ ಗೋಪಾಲಯ್ಯ, ಮಂಡ್ಯ ಮಿಲ್ಕ್ ಯೂನಿಯನ್ ಲಿಮಿಟೆಡ್ ನ ಎಂಡಿ ಡಾ.ಪಿ ಆರ್ ಮಂಜೇಶ್, ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ ನ ಗಿರೀಶ್ ಕೃಷ್ಣಮೂರ್ತಿ, ಡಾ.ಫಾರೂಖ್ ಅಹಮದ್ ಮನುರ್, ಜೀವಿತ್ ಎಂಟರ್ ಪ್ರೈಸಸ್, ಪವನ್ ರಂಖ, ಎನ್ ರಾಘವನ್, ರೋಟರಿ ಡಿಸ್ಟ್ರಿಕ್ಟ್ 3190, ಸೇರಿದಂತೆ ಮುಂತಾದವರನ್ನು ಸನ್ಮಾನಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!