SPECIAL STORY| ಸ್ವಾತಂತ್ರ್ಯ ದಿನದಂದು ಮೂಡುಬಿದಿರೆಯಲ್ಲಿ ʻರಾಜ ಒಡ್ಡೋಲಗʼ!

-ಹರೀಶ್‌ ಕೆ.ಆದೂರು

ನಾಡಿಗೆ ನಾಡೇ ಸ್ವಾತಂತ್ರ್ಯದ ಸಂಭ್ರಮದಲ್ಲಿರಬೇಕಾದರೆ ಮೂಡುಬಿದಿರೆಯಲ್ಲಿ ಮತ್ತಷ್ಟು ಸಂಭ್ರಮ ಕಳೆಕಟ್ಟಲಿದೆ. ಮೊಟ್ಟ ಮೊದಲ ಬಾರಿಗೆ ಮೈಸೂರಿನ ಮಹಾರಾಜರು ಜೈನಕಾಶಿಗೆ ಚಿತ್ತೈಸುತ್ತಿದ್ದಾರೆ. ಶಿಕ್ಷಣಕಾಶಿ, ಜೈನಕಾಶಿಯಾಗಿ ಪ್ರಸಿದ್ಧಿ ಪಡೆದ ಬಸದಿಗಳ ನಾಡಿನಲ್ಲಿ ಮೈಸೂರು ಒಡೆಯರ ಒಡ್ಡೋಲಗವಾಗಲಿದೆ!. ಇದಕ್ಕಾಗಿ ಈಗಾಗಲೇ ಸಾಕಷ್ಟು ಪೂರ್ವ ಸಿದ್ಧತೆಗಳಾಗಿವೆ.

ಮೂಡುಬಿದಿರೆಯ ಕಲ್ಲಬೆಟ್ಟು ಎಕ್ಸಲೆಂಟ್‌ ಪದವಿಪೂರ್ವ ಕಾಲೇಜಿಗೆ ಮೈಸೂರಿನ ಒಡೆಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮಿಸಲಿದ್ದಾರೆ. ಶಿಕ್ಷಣ ಸಂಸ್ಥೆಗಳ ಎರಡೂವರೆ ಸಾವಿರ ವಿದ್ಯಾರ್ಥಿಗಳ ಜೊತೆಗೆ ಅರಸರು ಸಂವಾದ ನಡೆಸಲಿದ್ದಾರೆ. ಮುಕ್ತವಾಗಿ ಒಂದು ಗಂಟೆಗಳ ಕಾಲ ಮಕ್ಕಳೊಂದಿಗೆ ಕಾಲ ಕಳೆಯುವ ಸುಯೋಗ ಮಕ್ಕಳಿಗೆ ಲಭ್ಯವಾಗಲಿದೆ. ಸ್ವಾತಂತ್ರ್ಯೋತ್ಸವದಂದೇ ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು ಮತ್ತಷ್ಟು ವಿಶೇಷ.

ಮೂಡುಬಿದಿರೆಗೆ ಮೊದಲ ಭೇಟಿ

2015ರಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನ ನೂತನ ಯದುವಂಶದ ಉತ್ತರಾಧಿಕಾರಿಯಾದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಈಗ ಪ್ರಸಿದ್ಧರಾಗಿರುವ ಯದುವೀರರನ್ನು ಯದುವಂಶದ 27ನೆಯ ಅಧಿಕಾರಿಯಾಗಿ, ‘ಮಹಾರಾಣಿ ಪ್ರಮೋದಾದೇವಿ’ಯವರು 2015ರ, ಫೆಬ್ರವರಿ 23ರಂದು ದತ್ತುಪುತ್ರನಾಗಿ ಸ್ವೀಕರಿಸಿದರು. ಯದುವೀರರ ಮೊದಲಹೆಸರು, ಯದುವೀರ್ ಗೋಪಾಲರಾಜೇ ಅರಸ್. ಪಟ್ಟಕ್ಕೇರಿದ ಬಳಿಕ ಮೊಟ್ಟ ಮೊದಲ ಬಾರಿಗೆ ಜೈನಕಾಶಿ ಮೂಡುಬಿದಿರೆ ಭೇಟಿ ನೀಡುತ್ತಿದ್ದಾರೆ. ಇದು ಮೂಡುಬಿದಿರೆಯ ಜನತೆಗೆ ಅವಿಸ್ಮರಣೀಯ ದಿನವಾಗಲಿದೆ.

ಮೈಸೂರು ರಾಜಮನೆತನವು 550 ವರ್ಷಗಳ ರಾಜ ಪರಂಪರೆಯನ್ನು ಹೊಂದಿದೆ. ಇಂತಹ ಮನೆತನದ ಮಹಾರಾಜರು ಮೂಡುಬಿದಿರೆಗೆ ಭೇಟಿ ನೀಡುತ್ತಿರುವ ಬಗ್ಗೆ ಸಾಕಷ್ಟು ಸಂಭ್ರಮಗಳೊಂದಿಗೆ ತಯಾರಿಗಳು ನಡೆಯುತ್ತಿವೆ.

ರಾಜ ಸಭಾಂಗಣದ ಉದ್ಘಾಟನೆ

ಎಕ್ಸಲೆಂಟ್‌ ಪದವಿಪೂರ್ವ ಕಾಲೇಜಿನಲ್ಲಿ ನಿರ್ಮಾಣಗೊಂಡ ʻರಾಜ ಸಭಾಂಗಣʼವನ್ನು ಮೈಸೂರು ಮಹಾರಾಜರು ಲೋಕಾರ್ಪಣೆ ಮಾಡಲಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ರ್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಮಹಾರಾಜರಿಂದ ಸನ್ಮಾನ ನಡೆಯಲಿದೆ. ಎಕ್ಸಲೆಂಟ್‌ ಸಮೂಹ ಸಂಸ್ಥೆಗಳ ವತಿಯಿಂದ ಸಾಂಪ್ರದಾಯಿಕ ರೀತಿಯ ರಾಜಮನೆತನಕ್ಕೆ ನಿಷ್ಠೆ, ಗೌರವಗಳನ್ನು ತೋರುವ ವಿಶೇಷ ರೀತಿಯ ಸನ್ಮಾನ ಇದೇ ಸಂದರ್ಭದಲ್ಲಿ ನಡೆಯಲಿದೆ. ಇಡೀ ಸಭಾಂಗಣವನ್ನು ರಾಜ ದರ್ಬಾರ್‌ ಮಾದರಿಯಲ್ಲಿ ವ್ಯವಸ್ಥೆಗೊಳಿಸುವ ಉದ್ದೇಶ ಸಂಸ್ಥೆಯ ಮುಖ್ಯಸ್ಥರದ್ದಾಗಿದೆ.

ಸಾಂಪ್ರದಾಯಿಕ ಸ್ವಾಗತ

ಮಹಾರಾಜರನ್ನು ಪಂಚವಾದ್ಯ ಘೋಷಗಳೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಮಾಡಲಾಗುತ್ತದೆ. ಎನ್‌ಸಿಸಿ ಕೆಡೆಟ್‌ಗಳಿಂದ ಗೌರವ ರಕ್ಷೆ ನಡೆಯಲಿದೆ. ಕಲಶ ಕನ್ನಿಕೆಯರು ಮಹಾರಾಜರನ್ನು ದರ್ಬಾರ್‌ಗೆ ಕರೆದೊಯ್ಯಲಿದ್ದಾರೆ. ಪನ್ನೀರ ಸಿಂಜನವಾಗಿ, ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ರಾಜಮರ್ಯಾದೆಯೊಂದಿಗೆ ಬರಮಾಡಿಕೊಳ್ಳುವ ತಯಾರಿ ನಡೆಯುತ್ತಿದೆ.

ಮೂರು ಗಂಟೆಗಳ ಕಾರ್ಯಕ್ರಮ: ಆಗಸ್ಟ್‌ 15ರಂದು 11ಗಂಟೆಗೆ ವಿಮಾನದಲ್ಲಿ ಬಜ್ಪೆಗೆ ಆಗಮಿಸಿ, ಅಲ್ಲಿಂದ 12ಗಂಟೆಗೆ ಮಹಾರಾಜರು ಕಲ್ಲಬೆಟ್ಟು ಎಕ್ಸಲೆಂಟ್‌ ಕ್ಯಾಂಪಸ್‌ ಪ್ರವೇಶಿಸಲಿದ್ದಾರೆ. ರಾಜ ಸಭಾಂಗಣದ ಉದ್ಘಾಟನೆ, ಸಂವಾದ ಕಾರ್ಯಕ್ರಮದ ಬಳಿಕ , ಎಕ್ಸಲೆಂಟ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್‌ ಅವರ ನಿವಾಸದಲ್ಲಿ ಭೋಜನ ನಡೆಸಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ಕಾಲೇಜಿನ ಅಧ್ಯಕ್ಷರು, ಯುವರಾಜ ಜೈನ್‌ ಮಾತನಾಡಿ..ʻʻಅನೇಕ ವಿದ್ಯಾರ್ಥಿಗಳಿಗೆ ಅರಸು ಪರಂಪರೆ, ಮಹಾರಾಜರು ಈ ಕಲ್ಪನೆಗಳೇ ಇಲ್ಲ. ವಿದ್ಯಾರ್ಥಿಗಳಿಗೆ ಇದರ ಅರಿವಾಗಬೇಕು, ಜೊತೆಗೆ ಮಹಾರಾಜರಿಂದ ನಮ್ಮ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿಸಬೇಕು ಎಂಬ ಕನಸು ನನಸಾಗುವ ಸಂತಸ ನಮಗಿದೆ. ಇದು ನಮ್ಮ ಸುಯೋಗ. ಮೈಸೂರು ಮಹಾರಾಜರು ನಮ್ಮ ಶಿಕ್ಷಣ ಸಂಸ್ಥೆಗೆ ಆಗಮಿಸುತ್ತಿರುವುದು ನಮಗೆ ಅವಿಸ್ಮರಣೀಯ ಆನಂದ ನೀಡುತ್ತಿದೆ.” ಎಂದರು.

ರಾಜಮನೆತನಕ್ಕೆ ನೀಡಬೇಕಾದ ಎಲ್ಲ ಗೌರವಗಳನ್ನು ಎಕ್ಸಲೆಂಟ್‌ ಸಂಸ್ಥೆಯ ವತಿಯಿಂದ ನೀಡುವ ವ್ಯವಸ್ಥೆ ಮಾಡಲಾಗಿದೆ. ನವವಿಧ ಧಾನ್ಯ, ನವವಿಧ ಪುಷ್ಪ ಸಮರ್ಪಣೆ, ಅದರೊಂದಿಗೆ ವಿಶಿಷ್ಟರೀತಿಯ ಸನ್ಮಾನವನ್ನು ಸಲ್ಲಿಸಿ, ಮಹಾರಾಜರಿಗೆ ಗೌರವ ನೀಡುವ ಕಾರ್ಯ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!