ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 43ನೇ ಪಂದ್ಯವು ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿತು. ರಾಜಸ್ಥಾನ್ ರಾಯಲ್ಸ್ ನೀಡಿದ್ದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 19.1 ಓವರ್‌ಗಳಲ್ಲೇ ಗೆಲುವಿನ ಗುರಿ ತಲುಪಿ ಇತಿಹಾಸ ನಿರ್ಮಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಘಾತ ಅನುಭವಿಸಿತು. ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಸಿಕ್ಸರ್ ಸಿಡಿಸಿದರೂ, ಮೂರನೇ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ವೈಭವ್ ಸೂರ್ಯವಂಶಿ ಕೂಡ ಬೇಗನೇ ನಿರ್ಗಮಿಸಿದರು. ಆದರೆ, ನಾಯಕ ರಿಯಾನ್ ಪರಾಗ್ (90 ರನ್) ಮತ್ತು ಧ್ರುವ್ ಜುರೆಲ್ (42) ಮೂರನೇ ವಿಕೆಟ್‌ಗೆ 102 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. ಕೊನೆಯಲ್ಲಿ ಡೊನೊವನ್ ಫೆರೇರಾ ಕೇವಲ 14 ಎಸೆತಗಳಲ್ಲಿ 47 ರನ್ ಚಚ್ಚಿದ್ದರಿಂದ ರಾಜಸ್ಥಾನ 225 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಡೆಲ್ಲಿಗೆ ಪಾತುಮ್ ನಿಸ್ಸಂಕಾ (62) ಮತ್ತು ಕೆ.ಎಲ್. ರಾಹುಲ್ (75) ಸ್ಪೋಟಕ ಆರಂಭ ನೀಡಿದರು. ಇವರಿಬ್ಬರು ಕೇವಲ 9.3 ಓವರ್‌ಗಳಲ್ಲಿ 110 ರನ್ ಸೇರಿಸಿ ಜಯದ ಹಾದಿ ಸುಗಮಗೊಳಿಸಿದರು. ನಿತೀಶ್ ರಾಣಾ (33) ಕೂಡ ಉತ್ತಮ ಸಾಥ್ ನೀಡಿದರು. ಮಧ್ಯದಲ್ಲಿ ವಿಕೆಟ್ ಬಿದ್ದರೂ, ಅಂತಿಮ ಹಂತದಲ್ಲಿ ಟ್ರಿಸ್ಟಾನ್ ಸ್ಟಬ್ಸ್ (18)* ಮತ್ತು ಅಶುತೋಷ್ ಶರ್ಮಾ (25)* ಅಜೇಯ ಆಟವಾಡಿ 5 ಎಸೆತಗಳು ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ 8 ಅಂಕಗಳೊಂದಿಗೆ 6ನೇ ಸ್ಥಾನಕ್ಕೇರಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೆಳಕ್ಕೆ ತಳ್ಳಿದೆ. ಮತ್ತೊಂದೆಡೆ, ಸೋತರೂ ರಾಜಸ್ಥಾನ್ ರಾಯಲ್ಸ್ 4ನೇ ಸ್ಥಾನದಲ್ಲೇ ಮುಂದುವರಿದಿದೆ.



