April 12, 2026
Sunday, April 12, 2026
spot_img

ರಾಮನವಮಿ ಸಂಭ್ರಮ: ಮೊಸಾಯಿಕ್‌ ಚಿತ್ತಾರದ ಸೀರೆಯಲ್ಲಿ ಕಂಗೊಳಿಸಿದ ನೀತಾ ಅಂಬಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸೀರೆಗಳನ್ನು ದೇಶ ವಿದೇಶಗಳಲ್ಲಿ ಪ್ರಖ್ಯಾತಗೊಳಿಸಿರುವ ನೀತಾ ಅಂಬಾನಿ ವಿವಿಧ ಪ್ರದೇಶಗಳ ಸೀರೆಗಳನ್ನು ಕಲಾತ್ಮಕವಾಗಿ ಧರಿಸಿ ಅದರ ವಿಶೇಷತೆಯನ್ನು ಪರಿಚಯಿಸಿದವರು. ಬಹುತೇಕರು ಮರೆತೇ ಹೋಗಿರುವ ಹಲವು ಸೀರೆ ಪ್ರಕಾರವನ್ನು ಪರಿಚಯಿಸಿದ ಹೆಗ್ಗಳಿಕೆ ಇವರದು. ಅದು ತಮ್ಮ ಮನೆಯ ಸಮಾರಂಭವಿರಲಿ ಅಥವಾ ಉದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮವಿರಲಿ ಅಥವಾ ವಿದೇಶದಲ್ಲಾಗಿರಲಿ ಅವರು ಕೆಲವು ಪ್ರದೇಶಗಳ ನೇಯ್ಗೆ, ಕಸೂತಿ, ಬಣ್ಣಗಾರಿಕೆ ಇತ್ಯಾದಿಗೆ ಹೊಸ ರೂಪ ನೀಡಿ ತಮ್ಮದೇ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಈಗಾಗಲೇ ಅನೇಕ ಸೀರೆ ವೈವಿಧ್ಯತೆಗಳನ್ನು ಪರಿಚಯಿಸಿರುವ ನೀತಾ ಅಂಬಾನಿ ಈ ಬಾರಿಯ ರಾಮನವಮಿ ಹಬ್ಬದಂದು ಶ್ರೀರಾಮನ ನಾಮ ವಿಶೇಷತೆಗಳಿರುವ ರಾಮನವಮಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ದೈವಿಕತೆ ಮತ್ತು ಪ್ರಾಚೀನ ಪರಂಪರೆ ಮಿಳಿತವಾಗಿರುವ ಈ ಮಣ್ಣಿನ ಬಣ್ಣದ ಕೈಮಗ್ಗದ ಸೀರೆಯ ತುಂಬಾ ರಾಮಶಿಲೆಯಿಂದ ಸ್ಫೂರ್ತಿಗೊಂಡ ಮೊಸಾಯಿಕ್‌ ಚಿತ್ತಾರಗಳಿದ್ದು, ಅವುಗಳಲ್ಲಿ ಬಹುಭಾಷೆಗಳಲ್ಲಿ‘ರಾಮ್‌’ ಎಂದು ಬರೆಯಲಾಗಿದೆ. ಇಕ್ಕತ್‌ ಶೈಲಿಯಲ್ಲಿ ನೇಯ್ದಿರುವ ಈ ಸೀರೆಯ ಸೆರಗಿನಲ್ಲಿ ಪವಿತ್ರ ಮಂತ್ರಗಳನ್ನು ಒಡಿಶಾ ಲಿಪಿಯಲ್ಲಿ ಮೂಡಿಸಲಾಗಿದೆ. ಕಡು ಮಣ್ಣು ಬಣ್ಣದ ಅಂಚು ಮತ್ತು ತುಸು ತಿಳಿ ಮಣ್ಣು ಕಂದಿನ ಮೈಬಣ್ಣವಿರುವ ಬಂಧ ಇಕ್ಕತ್‌ ಸೀರೆ ಒಡಿಶಾ ರಾಜ್ಯದ ವಿಶೇಷ ಎಂಬುದು ಗಮನಾರ್ಹ.

ಒಡಿಶಾದ ಕೆಐಐಟಿಯಲ್ಲಿ ಗೌರವ ಡಾಕ್ಟರೇಟ್‌ ಸ್ವೀಕರಿಸುವ ಸಂದರ್ಭದಲ್ಲಿ ನೀತಾ ಅಂಬಾನಿ ಆ ಪ್ರದೇಶದ ಸಾರ್ವಕಾಲಿಕ ಕುಶಲಕರ್ಮಿಗಳಿಗೆ ಹೃದಯಪೂರ್ವಕ ಗೌರವ ಸಲ್ಲಿಸುವ ಉದ್ದೇಶದಿಂದ ನೈಸರ್ಗಿಕ ಮಣ್ಣಿನ ಬಣ್ಣದ ಸೊಗಸಾದ ಇಕ್ಕತ್‌ ಸೀರೆ ಧರಿಸಿದ್ದರು. ಈ ಮೂಲಕ ಒಡಿಶಾದ ಶ್ರೀಮಂತ ಕೈಮಗ್ಗದ ಪರಂಪರೆಯನ್ನು ಗೌರವಿಸಿದ್ದಾರೆ. ಅಲ್ಲಿನ ರಾಜ್ಯ ಸರಕಾರವೇ ಈ ಸೀರೆಯನ್ನು ಸ್ವದೇಶಿ ನೇಕಾರ ಹರಿಶಂಕರ್‌ ಮೆಹೆರ್‌ರಿಂದ ತಯಾರಿಸಿದೆ. ಈ ಕುಶಲ ನೇಕಾರರಿಗೆ ಈ ಕಲಾತ್ಮಕ ಸೀರೆ ತಯಾರಿಸಲು ಬರೋಬ್ಬರಿ ಎರಡು ವರ್ಷ ತಗುಲಿವೆ. ಅಷ್ಟರ ಮಟ್ಟಿಗೆ ಈ ಕೈಮಗ್ಗದ ಸೀರೆಯನ್ನು ಅತ್ಯಂತ ಸೂಕ್ಷ್ಮ ಕುಶಲಕರ್ಮಿಗಳ ಸೃಜನಶೀಲತೆ ಬಳಸಿ ನೇಯ್ಗೆ ಮಾಡಲಾಗಿದೆ.
ನೈಸರ್ಗಿಕ ಬಣ್ಣವನ್ನೇ ಬಳಸಿರುವ ಈ ರಾಮನವಮಿ ಸೀರೆಯನ್ನು ಸಾಂಪ್ರದಾಯಿಕ ಬಂಧ ಅಂದರೆ ಟೈ ಡೈ ತಂತ್ರಜ್ಞಾನ ಬಳಸಿ ತಯಾರಿಸಿರುವುದು ಇನ್ನೊಂದು ವಿಶೇಷ. ಈ ಬಣ್ಣದೊಂದಿಗೆ ರಾಮನಾಮಗಳು ಸುಂದರವಾಗಿ ಸಂಯೋಜಿಸಲ್ಪಟ್ಟು ಭಕ್ತಿಭಾವ ಮೂಡಿಸುತ್ತವೆ. ಈ ಮೂಲಕ ಸೀರೆ ಎಂಬುದು ಕೇವಲ ಒಂದು ಉಡುಪಲ್ಲ, ಬದಲಾಗಿ ಅದೊಂದು ಸಂಪ್ರದಾಯ, ಅಧ್ಯಾತ್ಮ ಮತ್ತು ಕಥೆ ಹೇಳುವಿಕೆಯ ಸಂಭ್ರಮವಾಗಿದೆ ಎಂದು ನೀತಾ ಅಂಬಾನಿ ಸಾರಿದ್ದಾರೆ. ಜವಳಿಯೊಂದು ತನ್ನ ಸಂಸ್ಕೃತಿಯ ಕಂಪು, ಭಕ್ತಿ ಮತ್ತು ಕಾಲಾತೀತ ಜ್ಞಾನವನ್ನು ಹೇಗೆ ಪ್ರಸ್ತುತ ಪಡಿಸಬಲ್ಲದು ಎಂಬುದನ್ನು ಈ ವಿಶೇಷ ಸೀರೆ ಪ್ರತಿಬಿಂಬಿಸುತ್ತದೆ.
ಈ ಕೈಮಗ್ಗದ ರಾಮನವಮಿ ಸೀರೆಗೆ ಹೊಂದುವಂತೆ ನೀತಾ ಅಂಬಾನಿ ಎರಡು ಎಳೆಗಳ ಮಣಿಗಳ ಹಾರ, ಪೋಲ್ಕಿ ವಿನ್ಯಾಸದ ಕಿವಿಯೋಲೆ, ಕ್ಲಾಸಿಕ್‌ ಚಿನ್ನದ ಬಳೆಗಳನ್ನು ಧರಿಸಿದ್ದಾರೆ. ಅವರ ಒಟ್ಟು ಸೀರೆ ಲುಕ್‌ಗೆ ಲೋ ಬನ್‌ ಕೇಶ ವಿನ್ಯಾಸ ಮತ್ತು ಸಾಂಪ್ರದಾಯಿಕ ಕೆಂಪು ಬಿಂದಿ ವಿಶೇಷ ಕಳೆ ನೀಡಿದ್ದವು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !