ಹೊಸದಿಗಂತ ಡಿಜಿಟಲ್ ಡೆಸ್ಕ್:
ದಶಪಥ ಎಕ್ಸ್‌ಪ್ರೆಸ್ ವೇ ಶೇಷಗಿರಿಹಳ್ಳಿ ಟೋಲ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಸಿಬ್ಬಂದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸರು ಇಂದು ಬಂಧಿಸಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆಯ ಅಭಿಷೇಕ್ (29) ಮತ್ತು ಸಂತೋಷ್ (23) ಬಂಧಿತ ಆರೋಪಿಗಳು. ಆಹಾರ ಪೂರೈಕೆ ಮಾಡುವ ಕಂಪನಿಯಲ್ಲಿ ಇಬ್ಬರೂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ:
ನಗರದ ದಶಪಥ ಎಕ್ಸ್‌ಪ್ರೆಸ್ ವೇ ಶೇಷಗಿರಿಹಳ್ಳಿಯ ಟೋಲ್ ನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ ಸಿಕ್ಕೆಪಾಳ್ಯ ನಿವಾಸಿ ಪವನ್ (30) ಅವರನ್ನು ಹೆಜ್ಜಾಲ ಸಮೀಪ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.
ಆರೋಪಿಗಳು ಜೂ. 5 ರಂದು ಸ್ನೇಹಿತರೊಂದಿಗೆ ಕಾರಿನಲ್ಲಿ ರಾತ್ರಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಶೇಷಗಿರಿಹಳ್ಳಿ ಟೋಲ್ ನಲ್ಲಿ ಪವನ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಆ ಬಳಿಕ ಪವನ್ ಮನೆಗೆ ಊಟಕ್ಕೆ ಹೋಗುವಾಗ ಬೈಕ್ ನಲ್ಲಿ ಬಂದು ಆರೋಪಿಗಳು ಮತ್ತೆ ಗಲಾಟೆ ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿದ ಪರಿಣಾಮ ಆರೋಪಿಗಳು ಪವನ್ ಮೇಲೆ ಹಲ್ಲೆ ನಡೆಸಿ, ಹತ್ಯೆಗೈದಿದ್ದರು.
ಈ ಸಂಬಂಧ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಬಿಡದಿ ಪೊಲೀಸರು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.