90 ರ ಗಡಿಯಲ್ಲಿ ಔಟ್.. ಮತ್ತೊಮ್ಮೆ ಶತಕ ಮಿಸ್ ಮಾಡಿಕೊಂಡ ಸೂರ್ಯ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಣಜಿ ಟ್ರೋಫಿಯಲ್ಲಿ ಅದ್ಭುತ ಫಾರ್ಮ್‌ ಮುಂದುವರೆಸಿರುವ ಭಾರತದ ಸ್ಟಾರ್‌ ಬ್ಯಾಟರ್ ಸೂರ್ಯ‌ ಕುಮಾರ್‌ ಯಾದವ್ ಎರಡನೇ ಪಂದ್ಯದಲ್ಲೂ ಅಬ್ಬರಿಸಿದ್ದು, 90 ರ ಗಡಿಯಲ್ಲಿ ಔಟ್‌ ಆಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸೂರ್ಯ ಕೇವಲ 107 ಎಸೆತಗಳಲ್ಲಿ 95 ರನ್‌ಗಳ ಇನಿಂಗ್ಸ್‌ ಆಡಿದ್ದಾರೆ.‌ 8 ದಿನಗಳ ಹಿಂದೆ ಹೈದರಾಬ್‌ ವಿರುದ್ಧ ನಡೆದ ಪಂದ್ಯದಲ್ಲೂ ಸೂರ್ಯ 90 ರನ್‌ ಗಳಿಸಿ ಔಟ್‌ ಆಗಿದ್ದರು. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿ ಶತಕ ವಂಚಿತರಾಗಿದ್ದಾರೆ. ಆದರೆ ಈ ಆಕರ್ಷಕ ಇನ್ನಿಂಗ್ಸ್‌ ಗಳ ಮೂಲಕ ತಾನು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಯಾವ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂಬುದನ್ನು ತೋರಿಸಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಸೂರ್ಯ 14 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 95 ರನ್ ಗಳಿಸಿದ್ದರು. ಅದೇ ಸಮಯದಲ್ಲಿ, ಹೈದರಾಬಾದ್ ವಿರುದ್ಧದ ಹಿಂದಿನ ಪಂದ್ಯದಲ್ಲಿ, ಸೂರ್ಯ 80 ಎಸೆತಗಳಲ್ಲಿ 90 ರನ್ ಗಳಿಸಿದ್ದರು, ಅದರಲ್ಲಿ ಅವರು 15 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವ ಮೂಲಕ ಇನ್ನಿಂಗ್ಸ್‌ ಕಟ್ಟಿದ್ದರು.
ಸೂರ್ಯಕುಮಾರ್ ತಮ್ಮ ಎರಡೂ ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಆಡಳಿತದ ಗಮನ ಸೆಳೆದಿದ್ದಾರೆ. ಜೊತೆಗೆ ಟೀಂ ಇಂಡಿಯಾ ಟೆಸ್ಟ್‌ ನಲ್ಲಿ ಆಕ್ರಮಣಕಾರಿ ಶೈಲಿಯನ್ನು ಅಳವಡಿಸಿಕೊಳ್ಳುವ ಚಿಂತನ ನಡೆಸುತ್ತಿದೆ. ಸೂರ್ಯಕುಮಾರ್ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಚೊಚ್ಚಲ ಬಾರಿಗೆ ಸ್ಥಾನ ಪಡೆಯಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಲು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಬಹಳ ಮುಖ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸೂರ್ಯ ಅವರನ್ನು ಟೆಸ್ಟ್ ತಂಡದಲ್ಲಿ ನೋಡಲು ಬಯಸುತ್ತಿರುವುದಾಗಿ ಟ್ವೀಟ್ ಮೂಲಕ ಒತ್ತಾಯಿಸುತ್ತಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ 20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರಿಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಸೂರ್ಯ ಈ ವರ್ಷ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಈ ವರ್ಷ ಸೂರ್ಯ ಬ್ಯಾಟಿಂಗ್ ಪರಾಕ್ರಮದ ಮೂಲಕ ಟಿ20 ರ್ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಸ್ಥಾನಕ್ಕೇರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!