Tuesday, March 28, 2023

Latest Posts

SPECIAL STORY| ಪ್ರಸವ ಕ್ರಿಯೆ ಶಿಲ್ಪವಿರುವ ಅಪರೂಪದ ರಣಗಂಬ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶಿಶು ಜನಿಸುತ್ತಿರುವ ಸಂದರ್ಭದ ಶಿಲ್ಪವಿರುವ ಅಪರೂಪದ ರಣಗಂಬವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಬಗಿಯಲ್ಲಿ ಪತ್ತೆ ಹಚ್ಚಿದ್ದಾರೆ.

ರಣಗಂಬವೆಂದರೆ ಅದೊಂದು ಸ್ಥಂಭ ಮಾದರಿಯ ವೀರಗಲ್ಲು. ಈ ಪ್ರಕಾರದ ವೀರಗಲ್ಲಿನಲ್ಲಿ ಶಿಶು ಜನನದ ಹಂತದ ಶಿಲ್ಪವಿರುವುದು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ದೇವಾಲಯದ ಭಿತ್ತಿಗಳಲ್ಲಿ ಈ ಬಗೆಯ ಶಿಲ್ಪಗಳು ದೊರೆತ ಉದಾಹರಣೆಗಳಿವೆ. ಆದರೆ, ವೀರಗಲ್ಲಿನಲ್ಲಿ ಈ ರೀತಿಯ ಶಿಲ್ಪವಿರುವುದು ಈ ಹಿಂದೆ ಪತ್ತೆಯಾದ ವಿವರಗಳಿಲ್ಲ. ಆದ್ದರಿಂದ ಇದೊಂದು ಮಹತ್ವದ ಶೋಧವಾಗಿದೆ ಹಾಗೂ ಇದು ಕರ್ನಾಟಕದಲ್ಲಿ ಈವರೆಗೆ ದೊರೆತ ವೀರಗಲ್ಲುಗಳಲ್ಲಿಯೇ ಅಪರೂಪದ್ದಾಗಿದೆ ಎಂದು ನಾಡಿನ ಹಿರಿಯ ವಿದ್ವಾಂಸರು ಅಭಿಪ್ರಾಯಿಸಿ ಗೌಡರನ್ನು ಅಭಿನಂದಿಸಿದ್ದಾರೆ.

ಕಳೆದ ಭಾನುವಾರ ಮಾಬಗಿ ಗ್ರಾಮದಲ್ಲಿ ಕೈಗೊಂಡ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಸಾತು ದುಗ್ಗು ಗೌಡರ ಜಮೀನಿನಲ್ಲಿ ಈ ರಣಗಂಭ ಪತ್ತೆಯಾಗಿದೆ. ಒಂದು ಅಡಿ ಅಗಲ, ದಪ್ಪ ಮತ್ತು ಏಳು ಅಡಿ ಉದ್ದವಿರುವ ಈ ಸ್ಥಂಭದ ಮೂರು ಮುಖದಲ್ಲಿ ಶಿಲ್ಪಗಳಿದ್ದು, ಒಂದು ಮುಖದಲ್ಲಿ ಏನನ್ನೂ ಚಿತ್ರಿಸದೇ ಖಾಲಿ ಬಿಡಲಾಗಿದೆ ಎಂದು ಶ್ಯಾಮಸುಂದರ ತಿಳಿಸಿದರು.

ಶಿಲ್ಪಗಳಲ್ಲಿ ಯುದ್ಧದ ವಿವಿಧ ರೀತಿಯ ಚಿತ್ರಣ ಇಲ್ಲಿ ಕಾಣಬಹುದು. ಕಾಲಾಳುಗಳ, ಕುದುರೆ ಸವಾರರ ಹಾಗೂ ಗಜಪಡೆಗಳ ಯುದ್ಧ ಚಿತ್ರಣಗಳನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ. ಆಯಾ ಪ್ರಕಾರದ ಯುದ್ಧಗಳಲ್ಲಿ ತೊಡುವ ವೇಷ ಭೂಷಣ, ಬಳಸುವ ಆಯುಧಗಳನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಅಲ್ಲದೇ ಇಲ್ಲಿನ ಒಂದು ಕೋಷ್ಟಕದಲ್ಲಿ ಕೋಟೆ ಕಾಳಗದ ವಿವರ ಇದೆ. ಆದ್ದರಿಂದ ಇದು ಕೋಟೆ ಕಾಳಗದ ಸಂದರ್ಭದಲ್ಲಿ ಮಡಿದ ವೀರರ ಸ್ಮರಣಾರ್ಥವಾಗಿ ನೆಟ್ಟ ವೀರಗಲ್ಲಾಗಿದೆ ಎಂದು ಭಾವಿಸಬಹುದು ಎಂದು ತಿಳಿಸಿದರು.

ಈ ಮಾದರಿಯ ವೀರಗಂಭಗಳು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಾತ್ರ ದೊರೆತಿವೆ. ಬಡಗೇರಿ, ವಾಸರೆ, ವಂದಿಗೆ, ಅಂಗಡಿಬೈಲ್, ಬಾಡ, ಹೆಬ್ಬಾರನಕೆರೆ, ಕಾಯ್ಕಿಣಿ, ಹಳದಿಪುರ, ಕೆಕ್ಕಾರ, ಚಂದಾವರ, ಗೋಕರ್ಣ, ಮಂಕಿ ಮೊದಲಾದೆಡೆಗಳಲ್ಲಿ ಸೇರಿ ಸುಮಾರು ಹದಿನೈದು ಕಂಬಗಳು ಈವರೆಗೆ ದೊರೆತಿವೆ. ಇವುಗಳಲ್ಲಿ ಆರೇಳು ಕಂಬಗಳಲ್ಲಿ ಶಾಸನಗಳು ದೊರೆತಿದ್ದು ಇವು ನಾಗವರ್ಮ ಅರಸನ ಆಳ್ವಿಕೆ ಉಲ್ಲೇಖಿಸುತ್ತದೆ ಎಂದರು.

ಈ ಕಂಬಗಳಲ್ಲಿ ದೊರೆಯುವ ಶಾಸನಗಳ ಆಧಾರದಿಂದ ನಾಗವರ್ಮ ಅರಸನ ಕಾಲವನ್ನು ಕ್ರಿ.ಶ. 1070 ರಿಂದ 1113 ಎಂದು ನಿಷ್ಕರ್ಷಿಸಲಾಗಿದೆ. ಮಾಬಗಿಯ ಕಂಬವೂ ಸಹ ನಾಗವರ್ಮ ಅರಸನ ಕಾಲದ್ದೇ ಆಗಿದೆ. ಇದಕ್ಕೆ ಪೂರಕವಾಗಿ ಮಾಬಗಿ ಸಮೀಪದ ಅಂಗಡಿಬೈಲಿನಲ್ಲಿ ಇದೇ ಮಾದರಿಯ ಒಂದು ಕಂಬ ಹಾಗೂ ನಾಗವರ್ಮ ಅರಸನನ್ನು ಉಲ್ಲೇಖಿಸುವ ಶಾಸನ ಶಿಲೆ ದೊರೆತಿವೆ ಎಂದು ವಿವರಿಸಿದರು.

ಇದೇ ವೇಳೆ ಕ್ಷೇತ್ರ ಕಾರ್ಯಕ್ಕೆ ಸಹಕರಿಸಿದ ಸ್ಥಳೀಯರಾದ ನಾಗರಾಜ ಗಣಪತಿ ಹಳ್ಳೇರ, ಗೋವಿಂದ ಭಟ್ಟ, ಸಾತು ದುಗ್ಗು ಗೌಡ ಹಾದಿಮನೆ, ಹಾಲು ಗೌಡ, ಅಚವೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ, ಹಿರಿಯ ಲಿಪಿತಜ್ಞ ಡಾ. ದೇವರಕೊಂಡಾ ರೆಡ್ಡಿ, ಪ್ರೊ. ದೇವರಾಜ ಸ್ವಾಮಿ, ಡಾ. ರವಿಕುಮಾರ ಕೆ. ನವಲಗುಂದಗೆ ಧನ್ಯವಾದ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!