October 10, 2026
Saturday, October 10, 2026
spot_img

ಗಂಡನ ಜೊತೆ ತವರಿಗೆ ಬಂದ ರಶ್ಮಿಕಾ ಮಂದಣ್ಣ: ಕೊಡಗಿನ ಅಳಿಯನಿಗೆ ಭರ್ಜರಿ ಆತಿಥ್ಯ!

ಹೊಸ ದಿಗಂತ ವರದಿ, ಮಡಿಕೇರಿ:‌

ನ್ಯಾಷನಲ್‌ ಕ್ರಶ್‌, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ವೀರಾಜಪೇಟೆ ನಗರದ ʻಸೆರೆನಿಟಿ ಹಾಲ್‌ʼನಲ್ಲಿ ಅದ್ಧೂರಿ ಡಿನ್ನರ್‌ ಪಾರ್ಟಿ ನಡೆಯಿತು. ವೀರಾಜಪೇಟೆಯ ಗಣ್ಯರು, ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಡಿನ್ನರ್‌ ಪಾರ್ಟಿಯು ಸಂಭ್ರಮದಿಂದ ಕೂಡಿತ್ತು.

ಈ ಸಂತಸದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ರಾಜಸ್ಥಾನದ ಉದಯಪುರದಲ್ಲಿ ಫೆ.26ರಂದು ನೆರವೇರಿದ್ದ ವಿರೊಶ್‌ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ ನೆರವೇರಿತ್ತು.
ಆದರೆ ಮದುವೆಯಾದ ಬಳಿಕ ಮೊದಲ ಬಾರಿಗೆ ತವರಿಗೆ ಆಗಮಿಸಿದ ರಶ್ಮಿಕಾ ಕೊಡಗಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದು, ಅವರಿಗೆ ತಂದೆಯಿಂದ ಅತ್ಯಮೂಲ್ಯ ಉಡುಗೊರೆಯೂ ಲಭಿಸಿದೆ.

ಕೊಡಗಿನಲ್ಲಿ ತಾವು ವಾಸವಿರುವ ಭವ್ಯವಾದ ಬಂಗಲೆಯನ್ನು ಮದನ್ ಮಂದಣ್ಣ ದಂಪತಿ ರಶ್ಮಿಕಾಗೆ ಉಡುಗೊರೆಯಾಗಿ ನೀಡಿದ್ದಾರೆ.
ಮದುವೆಯಾದ ಬಳಿಕ ರಶ್ಮಿಕಾ- ವಿಜಯ್ ದೇವರಕೊಂಡ ಜೋಡಿ ಮೊದಲ ಬಾರಿಗೆ ಕೊಡಗಿಗೆ ಆಗಮಿಸಿದ ಹಾಗೂ ರಶ್ಮಿಕಾರ ಜನ್ಮದಿನದ ಹಿನ್ನೆಲೆಯಲ್ಲಿ ವೀರಾಜಪೇಟೆಯ ʻಸೆರೆನಿಟಿ ಹಾಲ್‌ʼನಲ್ಲಿ ಡಿನ್ನರ್‌ ಪಾರ್ಟಿ ಆಯೋಜಿಸಲಾಗಿತ್ತು.

ಮದುವೆ ಬಳಿಕ ಕೊಡಗಿನಲ್ಲೂ ಸಾಂಪ್ರದಾಯಿಕವಾಗಿ ಆರತಕ್ಷತೆ ಇಟ್ಟುಕೊಳ್ಳುವುದಾಗಿ ಮದನ್ ಮಂದಣ್ಣ ಹೇಳಿಕೊಂಡಿದ್ದರು. ಈ ಎರಡೂ ಸಂಭ್ರಮಕ್ಕೆ ಬಂಧು ಬಳಗ, ಆಪ್ತರನ್ನಷ್ಟೇ ಆಹ್ವಾನಿಸಿದ್ದರು.ಕೊಡಗಿನ ಸಾಂಪ್ರದಾಯಿಕ ಸೀರೆಯಲ್ಲಿ ರಶ್ಮಿಕಾ ಸಂಭ್ರಮದಿಂದ ಭಾಗಿಯಾಗಿದ್ದರು.

Must Read