ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಪ್ರೀಮಿಯರ್ ಶೋನಲ್ಲಿ ನಟಿ ಸಾಯಿ ಪಲ್ಲವಿ ರಾವಣನ ಕುರಿತು ಆಡಿದ ಮಾತುಗಳು ಈಗ ಇಂಟರ್ನೆಟ್ನಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ. ರೇಡ್ ಕಾರ್ಪೆಟ್ ಸಂದರ್ಶನದಲ್ಲಿ ಮಾತನಾಡಿದ ಅವರು, ರಾವಣ ಸಂಪೂರ್ಣವಾಗಿ ಕೆಟ್ಟವನಲ್ಲ ಮತ್ತು ನಮ್ಮೊಳಗಿರುವ ರಾವಣನನ್ನು ಗುರುತಿಸಿ ತಿದ್ದಿಕೊಳ್ಳಬೇಕು ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಸಾಯಿ ಪಲ್ಲವಿ ಹೇಳಿದ್ದೇನು?
ಚಿತ್ರದ ಪ್ರೀಮಿಯರ್ ಶೋ ವೇಳೆ ಭಾರತೀಯ ಸಂಸ್ಕೃತಿ ಮತ್ತು ಮಹಾಕಾವ್ಯಗಳ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, “ಒಬ್ಬ ನಂಬಿಕೆಯುಳ್ಳವರಾಗಿ ಈ ಗ್ರಂಥವನ್ನು ನೋಡಿದಾಗ, ನಮ್ಮೊಳಗೆ ಇರುವ ಒಳ್ಳೆಯದು ಮತ್ತು ಕೆಟ್ಟದ್ದನ್ನು ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಾಲಕ್ರಮೇಣ ನಮ್ಮನ್ನು ನಾವು ತಿದ್ದಿಕೊಳ್ಳಲು ಇದು ನೆರವಾಗುತ್ತದೆ. ಏಕೆಂದರೆ, ರಾವಣ ಸಂಪೂರ್ಣವಾಗಿ ಕೆಟ್ಟವನಲ್ಲ. ನಮ್ಮಲ್ಲಿರುವ ರಾವಣನನ್ನು ನಾವು ಗುರುತಿಸಿ, ಸಮಯ ಕಳೆದಂತೆ ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಿನ್ನ ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. “ತನ್ನನ್ನು ಅಪಹರಿಸಿದವನನ್ನೇ ಒಬ್ಬ ಮಹಿಳೆ ಹೊಗಳುತ್ತಿರುವುದು ಸರಿಯಲ್ಲ” ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅನಗತ್ಯ ವಿವಾದ ಮತ್ತು ನೆಗೆಟಿವಿಟಿಗೆ ಕಾರಣವಾಗುವ ಇಂತಹ ಹೇಳಿಕೆಗಳಿಂದ ದೂರ ಇರಬೇಕಿತ್ತು ಎಂದಿದ್ದಾರೆ.
ಇದನ್ನೂ ಓದಿ:
ಸಾಯಿ ಪಲ್ಲವಿ ಅವರ ಮಾತನ್ನು ಬೆಂಬಲಿಸಿರುವ ಹಲವರು, “ಅವರು ರಾವಣನನ್ನು ನಮ್ಮೊಳಗಿನ ಕೆಟ್ಟ ಗುಣಗಳಿಗೆ ಹೋಲಿಸಿದ್ದಾರೆ. ಪ್ರತಿಯೊಬ್ಬರಲ್ಲೂ ಇರುವ ಆ ಕೆಟ್ಟ ಆಲೋಚನೆಗಳನ್ನು ಮೆಟ್ಟಿ ನಿಲ್ಲಬೇಕು ಎಂಬ ಅರ್ಥದಲ್ಲಿ ಹೇಳಿದ್ದಾರೆ. ಇದರಲ್ಲಿ ವಿವಾದವೇನೂ ಇಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರಾಮಾಯಣ: ಭಾಗ 1’ ಚಿತ್ರವು ನವೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ.



