June 30, 2026
Tuesday, June 30, 2026
spot_img

ಐಪಿಎಲ್ ಫೈನಲ್ ಗೆ ಆರ್‌ಸಿಬಿ ಎಂಟ್ರಿ: ಬೆಂಗಳೂರಿನಲ್ಲಿ ಐಪಿಎಲ್ ಸಂಭ್ರಮಾಚರಣೆಗೆ ಗೈಡ್ ಲೈನ್ ರಿಲೀಸ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯ ಫೈನಲ್ ಗೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿ ಎಂಟ್ರಿ ನೀಡಿದ್ದು, ಆರ್‌ಸಿಬಿಯ ಅಭಿಮಾನಿಗಳಿಗೆ ಕೆಲ ಸುರಕ್ಷಿತ ಮಾರ್ಗಸೂಚಿಗಳನ್ನ ಬೆಂಗಳೂರು ಪೊಲೀಸರು ಪ್ರಕಟಿಸಿದ್ದಾರೆ.

ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ‌ನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಆರ್‌ಸಿಬಿಯು ಯಾರ ಎದುರು ಫೈನಲ್ ಪಂದ್ಯ ಎಂಬುವುದು 2ನೇ ಕ್ವಾಲಿಫೈಯರ್ ಪಂದ್ಯದ ಬಳಿಕ ನಿರ್ಧಾರವಾಗಲಿದೆ. ಇದರ ಮುನ್ನ ಫೈನಲ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿಯ ಅಭಿಮಾನಿಗಳಿಗೆ ಕೆಲ ಸುರಕ್ಷಿತ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಸಂಭ್ರಮಾಚರಣೆಗೆ ಬ್ರೇಕ್

ಐಪಿಎಲ್ ಫೈನಲ್ ಪಂದ್ಯದ ಫಲಿತಾಂಶದ ಬಳಿಕ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗಳನ್ನ ಮಾಡುವಂತಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸಂಬಂಧಪಟ್ಟ ಅಧಿಕಾರಿಗಳ ಮುನ್ಸೂಚನೆ, ಅನುಮತಿ ಇಲ್ಲದೆ ಪಂದ್ಯದ ನೇರಪ್ರಸಾರ ವೀಕ್ಷಣೆಗಾಗಿ ರಸ್ತೆಗಳತ್ತ ಮುಖ ಮಾಡಿ ಎಲ್‌ಇಡಿ ಪರದೆ ಅಳವಡಿಸಬಾರದು. ಈಗಾಗಲೇ ಇರುವ ಎಲ್‌ಇಡಿ ವಾಲ್‌ಗಳಲ್ಲಿ ಪಂದ್ಯವನ್ನು ಪ್ರಸಾರ ಮಾಡುವಂತಿಲ್ಲ.

ಪಟಾಕಿಗಳು ಬ್ಯಾನ್

ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡತಕ್ಕದ್ದು. ಪಟಾಕಿಗಳನ್ನು ಸಿಡಿಸಬಾರದು, ಅಪಾಯಕಾರಿ ವಸ್ತುಗಳನ್ನು ಬಳಸಬಾರದು.

ಬೈಕ್ ರ‍್ಯಾಲಿ ಮಾಡುವಂತಿಲ್ಲ

ಯಾವುದೇ ರೀತಿಯ ಬೈಕ್ ರ‍್ಯಾಲಿ, ಅತಿವೇಗದ ಚಾಲನೆ, ಸ್ಟಂಟ್, ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ಮಾಡುವುದು ನಿಷೇಧವಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿ, ಅಸಭ್ಯವಾಗಿ ವರ್ತಿಸಬಾರದು‌.

ಖಾತೆಗಳ ಮೇಲೆ ನಿಗಾ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್, ದ್ವೇಷಪೂರಿತ ಸಂದೇಶ, ವದಂತಿಗಳನ್ನು ಹಂಚಬಾರದು.

ಕಾನೂನು – ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನ ಮರೆಯಬಾರದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !