ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಕೃತಿ ವಿಕೋಪದಿಂದಾಗಿ ತತ್ತರಿಸಿರುವ ಅಸ್ಸಾಂ ರಾಜ್ಯದಲ್ಲಿ ಜಲಪ್ರಳಯ ಸಂಭವಿಸಿದ್ದು, ಲಕ್ಷಾಂತರ ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಸಹ-ಮಾಲಕಿ ಹಾಗೂ ಪ್ರಸಿದ್ಧ ಉದ್ಯಮಿ ಅನನ್ಯಾ ಬಿರ್ಲಾ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗ್ರೌಂಡ್ ರಿಯಾಲಿಟಿ: ಹಳ್ಳಿಗಳಿಗೆ ಖುದ್ದಾಗಿ ಭೇಟಿ
ಅನನ್ಯಾ ಬಿರ್ಲಾ ಫೌಂಡೇಶನ್ ಮೂಲಕ ಕಾರ್ಯಾಚರಣೆಗಿಳಿದ ಅವರು, ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ಬೃಹತ್ ಪರಿಹಾರ ಅಭಿಯಾನ ಆರಂಭಿಸಿದ್ದಾರೆ. ಕೇವಲ ಹಣಕಾಸಿನ ಸಹಾಯ ನೀಡದೆ, ಜೋರ್ಹತ್ ಮತ್ತು ಶಿವಸಾಗರ್‌ನಂತಹ ತೀವ್ರ ಹಾನಿಗೊಳಗಾದ ಗ್ರಾಮೀಣ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಬಾಧಿತರ ಅಳಲನ್ನು ಆಲಿಸಿದ್ದಾರೆ. ಪ್ರಸ್ತುತ ಈ ದೃಶ್ಯಗಳು ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆಯುತ್ತಿವೆ.
3 ಪ್ರಮುಖ ನಗರಗಳಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ
ಸಂತ್ರಸ್ತರಿಗೆ ನೆರವಾಗಲು ಜುಲೈ 28 ರಿಂದ ಆಗಸ್ಟ್ 2 ರವರೆಗೆ ಬೆಂಗಳೂರು, ಮುಂಬೈ ಹಾಗೂ ಕೋಲ್ಕತ್ತಾಗಳಲ್ಲಿ ವಿಶೇಷ ಪರಿಹಾರ ಸಾಮಗ್ರಿ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗಿತ್ತು. ಸಾರ್ವಜನಿಕರಿಂದ ಸಂಗ್ರಹವಾದ ನೆರವನ್ನು ಅವರ ತಂಡವು ಯಶಸ್ವಿಯಾಗಿ ಸಂತ್ರಸ್ತರಿಗೆ ತಲುಪಿಸಿದೆ.
“ಇದು ನನ್ನ ಕರ್ತವ್ಯ”: ಸರಳ ಉತ್ತರ
ಸಹಾಯ ಹಸ್ತ ಚಾಚಿ ಮುಂಬೈಗೆ ಮರಳಿದ ಅನನ್ಯಾ ಬಿರ್ಲಾ ಅವರಿಗೆ ಮಾಧ್ಯಮಗಳು ಹಾಗೂ ಪಾಪರಾಜಿಗಳು ಶ್ಲಾಘನೆ ವ್ಯಕ್ತಪಡಿಸಿದಾಗ, “ಇದು ಪ್ರತಿಯೊಬ್ಬರ ಕರ್ತವ್ಯ” ಎಂದು ಸರಳವಾಗಿ ಉತ್ತರಿಸಿ ಎಲ್ಲರ ಗಮನ ಸೆಳೆದಿದ್ದಾರೆ.



