May 27, 2026
Wednesday, May 27, 2026
spot_img

RCB ರಣತಂತ್ರದ ರಣಘೋಷ! ಗೆದ್ದ ಮೇಲೆ ಪಾಟೀದಾರ್ ಹೇಳಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಧರ್ಮಶಾಲಾದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್‌ಗಳ ದೊಡ್ಡ ಅಂತರದ ಗೆಲುವು ಸಾಧಿಸಿದ ಆರ್‌ಸಿಬಿ, ಟ್ರೋಫಿ ಕನಸಿಗೆ ಮತ್ತಷ್ಟು ಹತ್ತಿರವಾಗಿದೆ. ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ ಸ್ಫೋಟಕ ಬ್ಯಾಟಿಂಗ್ ಮೂಲಕ 254 ರನ್‌ಗಳ ಭಾರೀ ಮೊತ್ತ ಕಲೆಹಾಕಿತು.

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ರಜತ್ ಪಾಟಿದಾರ್, “ಇದು ನಮಗೆ ಅತ್ಯುತ್ತಮ ಪಂದ್ಯವಾಗಿತ್ತು. ವಿಶೇಷವಾಗಿ ಬ್ಯಾಟ್ಸ್‌ಮನ್‌ಗಳು ಆಡಿದ ರೀತಿಯೇ ಗೆಲುವಿನ ಪ್ರಮುಖ ಕಾರಣ. ನಾವು ಗುಜರಾತ್ ಬೌಲರ್‌ಗಳ ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಕಣಕ್ಕಿಳಿದಿದ್ದೇವೆ” ಎಂದು ಹೇಳಿದರು. ಆರಂಭದಲ್ಲಿ ಕೆಲ ಎಸೆತಗಳನ್ನು ಗಮನಿಸಿ ಬಳಿಕ ಪಿಚ್‌ಗೆ ತಕ್ಕಂತೆ ಆಟ ಕಟ್ಟಿಕೊಂಡಿದ್ದಾಗಿ ತಿಳಿಸಿದರು.

ಟಾಪ್ ಆರ್ಡರ್ ಪ್ಲ್ಯಾನ್ ಸಕ್ಸಸ್

ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಆರಂಭದಿಂದಲೇ ಒತ್ತಡಕ್ಕೆ ಸಿಲುಕಿತು. ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ವಿಕೆಟ್‌ಗಳನ್ನು ಪವರ್‌ಪ್ಲೇಯಲ್ಲೇ ಕಳೆದುಕೊಂಡ ತಂಡ ಮತ್ತೆ ಚೇತರಿಸಿಕೊಳ್ಳಲಿಲ್ಲ. ಅಂತಿಮವಾಗಿ 19.3 ಓವರ್‌ಗಳಲ್ಲಿ 162 ರನ್‌ಗೆ ಆಲೌಟ್ ಆಯಿತು. “ಟಾಪ್-3 ಬ್ಯಾಟರ್‌ಗಳನ್ನು ಬೇಗ ಔಟ್ ಮಾಡುವುದು ನಮ್ಮ ಮುಖ್ಯ ಯೋಜನೆ ಆಗಿತ್ತು” ಎಂದು ಪಾಟಿದಾರ್ ಹೇಳಿದರು.

ಇದನ್ನೂ ಓದಿ:

ಫೈನಲ್ ಮೇಲೆ ಆರ್‌ಸಿಬಿ ಕಣ್ಣು

ಇಂಪ್ಯಾಕ್ಟ್ ಪ್ಲೇಯರ್ ಆಗಿ ರೊಮಾರಿಯೊ ಶೆಫರ್ಡ್ ಅವರನ್ನು ಬಳಸಿದ ತಂತ್ರವೂ ಯಶಸ್ವಿಯಾಯಿತು. ಮಧ್ಯದ ಓವರ್‌ಗಳಲ್ಲಿ ಅವರ ಬೌಲಿಂಗ್ ಸಾಮರ್ಥ್ಯ ಪರೀಕ್ಷಿಸುವ ಉದ್ದೇಶವಿತ್ತು ಎಂದು ಪಾಟಿದಾರ್ ಹೇಳಿದರು. ಒಟ್ಟಾರೆ ಆರ್‌ಸಿಬಿ ರೂಪಿಸಿದ ಪ್ರತಿಯೊಂದು ಯೋಜನೆಯೂ ಯಶಸ್ಸಿಗೆ ಕಾರಣವಾಗಿದ್ದು, ಇದೀಗ ಮೇ 31ರಂದು ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ತಂಡ ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !