ಸಿದ್ದರಾಮಯ್ಯ ಅವರ ದೇಶ ವಿಭಜನೆಯ ಹೇಳಿಕೆಗೆ ದೇಶಭಕ್ತರ ಪ್ರತಿಕ್ರಿಯೆ: ಡಾ.ವೈ. ಭರತ್ ಶೆಟ್ಟಿ

ಹೊಸದಿಗಂತ ವರದಿ,ಮಂಗಳೂರು:

ಸಾವರ್ಕರ್ ಭಾವಚಿತ್ರ ಅಳವಡಿಕೆ ಕುರಿತಾಗಿ ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ‘ಮುಸ್ಲಿಂ ಏರಿಯಾ’ ಎನ್ನುವ ಹೇಳಿಕೆ ದೇಶ ವಿಭಜನೆಯ ಹೇಳಿಕೆಯಾಗಿದೆ. ಇದಕ್ಕೆ ದೇಶಭಕ್ತರು ತಮ್ಮದೇ ರೀತಿಯಲ್ಲಿ ಪ್ರತಿಭಟನೆಯನ್ನು ತೋರಿಸಿದ್ದಾರೆ ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ಧ ಮೊಟ್ಟೆ ಎಸೆತ ಹಾಗೂ ಅವರ ಪ್ರಯಾಣದ ಸಂದರ್ಭ ನಡೆಯುವ ಪ್ರತಿಭಟನೆಯ ಕುರಿತಂತೆ ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದ್ದಾರೆ.
ಭಾರತ ಸಮಗ್ರ ರಾಷ್ಟ್ರೀಯತೆಯ ಭಾವನೆಯನ್ನು ಹೊಂದಿರುವ ಹಾಗೂ ಹಿಂದು ಬಹುಸಂಖ್ಯಾತರು ಇರುವ ದೇಶವಾಗಿದೆ. ಸ್ವಾತಂತ್ರ್ಯ ಕಾಲದಲ್ಲಿ ಮುಸ್ಲಿಂ ಏರಿಯಾ ಎಂದು ಬಿಂಬಿಸಿ ಪಾಕಿಸ್ತಾನ ದೇಶವನ್ನು ರಚಿಸಿಸಲು ಕಾಂಗ್ರೆಸ್ ಮುಖಂಡರು ಅನುಮತಿ ನೀಡಿರುವುದನ್ನು ಸ್ಮರಿಸಬಹುದು. ಓಟ್ ಬ್ಯಾಂಕ್ ರಾಜಕೀಯಕ್ಕೆ ಸಿದ್ದರಾಮಯ್ಯ ಅವರು ಮತ್ತೆ ಅಲ್ಪಸಂಖ್ಯಾತರನ್ನು ಒಲೈಸುವ ಉದ್ದೇಶದಿಂದ, ಅಧಿಕಾರದ ದುರಾಸೆಯಿಂದ ಮುಸ್ಲಿಂ ಏರಿಯಾ ಎಂದು ಬಿಂಬಿಸಿ ಮತ್ತೆ ವಿಭಜನೆಯ ಮಾದರಿಯ ಹೇಳಿಕೆ ನೀಡುತ್ತಿರುವುದು ಖಂಡನೀಯ. ದೇಶದ ಜನರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ, ಪ್ರತಿಭಟನೆಯ ರೂಪದಲ್ಲಿ ಹೊರಹೊಮ್ಮಿದೆ ಎಂದು ಶಾಸಕರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಮತ್ತೆ ಬೆಂಕಿ ಹಚ್ಚುವ ಮಾತುಗಳನ್ನಾಡಿದ್ದು, ಈ ಕೆಲಸ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಿಜೆಪಿ ಸರಕಾರಕ್ಕೆ ಬೆಂಕಿಯನ್ನು ನಂದಿಸುವ ಶಕ್ತಿ ಸಾಮರ್ಥ್ಯವಿದೆ ಎಂದು ಡಾ.ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!