ಫಲ್ಗುಣಿ ನದಿಯಲ್ಲಿನ ಸಕ್ರಮ ಮರಳುಗಾರಿಕೆಗೆ ರೀಲ್ ಪೊಲೀಸರ ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದಿಂದ ಬೈಲುಪೇಟೆ ಮಸೀದಿಗೆ ಸಾಗುವ ರಸ್ತೆ ಬದಿಯಲ್ಲಿ ಫಲ್ಗುಣಿ ನದಿಯಲ್ಲಿ ನಡೆಯುತ್ತಿರುವ ಅಧಿಕೃತ ಮರಳುಗಾರಿಕೆಗೆ ಭಾನುವಾರ ಬೆಳಿಗ್ಗೆ ಕನ್ನಡ ಚಿತ್ರ ನಟ ಶ್ರೀಮುರಳಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತು. ಆದರೆ ದಾಳಿ ನಡೆಸಿದ್ದು ರೀಯಲ್ ಪೋಲೀಸರಲ್ಲ ರೀಲ್ ಪೊಲೀಸರು.

ಹೊಂಬಾಳೆ ಫಿಲಂಸ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ, ಶ್ರೀಮುರಳಿ ನಾಯಕ ನಟನಾಗಿರುವ `ಬಘೀರ'(ಚಿರತೆ) ಚಿತ್ರ ತಂಡ ಮಾಯಾ ಇಂಟರ್ ನ್ಯಾಷನಲ್ ಸಂಸ್ಥೆ ಗುರುಪುರದ ಪಲ್ಗುಣಿ ನದಿಯಲ್ಲಿ ನಡೆಸುತ್ತಿರುವ ಅಧಿಕೃತ ಮರಳುಗಾರಿಕಾ ಪ್ರದೇಶದಲ್ಲಿ ಶೂಟಿಂಗ್ ನಡೆಸಿತು.

ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿರುವ ನಟ ಶ್ರೀಮುರಳಿ ಮತ್ತು ಅವರ ಪೊಲೀಸ್ ತಂಡ ಇಲ್ಲಿನ ಮರಳು ಅಡ್ಡೆಗೆ ದಾಳಿ ಮಾಡಿತು. ಆ ವೇಳೆ `ಅಕ್ರಮ ಮರಳುಗಾರಿಕೆ’ ಯ ದೃಶ್ಯ ಒಂದನ್ನು ಚಿತ್ರೀಕರಿಸಲಾಯಿತು. ಮರಳು ಅಡ್ಡೆಯಲ್ಲಿ ಜೆಸಿಬಿ, ಮರಳು ತುಂಬಿದ ಲಾರಿಗಳು, ಡ್ರೆಜ್ಜಿಂಗ್ ಮೆಶಿನ್, ಪೊಲೀಸ್ ಜೀಪ್ ಇದ್ದವು.

ಶ್ರೀಮುರಳಿ ನೇತೃತ್ವದ ಪೊಲೀಸ್ ತಂಡ ಮರಳುಗಾರಿಕೆಯ ಸ್ಥಳದಲ್ಲಿ ಡ್ರೆಜ್ಜಿಂಗ್ ಮೂಲಕ ಮರಳುಗಾರಿಕೆ ನಡೆಸುತ್ತಿರುವವರ ಮೇಲೆ ದಾಳಿ ಮಾಡುತ್ತದೆ.ಈ ವೇಳೆ ಡ್ರೆಜ್ಜಿಂಗ್ ಮೆಶಿನ್‍ನಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ಮೂವರು ಬಂಧನ ಭೀತಿಯಿಂದ ನೀರಿಗೆ ಹಾರಿ ಪಾರಾಗುತ್ತಾರೆ. ಚಿತ್ರ ತಂಡವು ಇಲ್ಲಿ ಇದೇ ರೀತಿಯ ಮೂರು ದೃಶ್ಯಗಳ ಚಿತ್ರೀಕರಣ ನಡೆಸಿತು.
ಡಾ. ಸೂರಿ ನಿರ್ದೇಶನದ ಚಿತ್ರ ಇದಾಗಿದ್ದು, ಕೆಜಿಎಫ್ ಪ್ರಸಿದ್ಧಿಯ ಪ್ರಶಾಂತ್ ನೀಲ್ ಚಿತ್ರಕತೆ ಬರೆದಿದ್ದಾರೆ. ತಾರಾಗಣದಲ್ಲಿ ಶ್ರೀಮುರಳಿ, ರುಕ್ಮಿಣಿ ವಸಂತ್ ಮತ್ತಿತರರು ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!