ದಾರಿ ತಪ್ಪಿಸುವ, ಪ್ರಚೋದನಕಾರಿ ಕಾರ್ಯಕ್ರಮಗಳ ಪ್ರಸಾರ ಬೇಡ: ಟಿವಿ ಚಾನೆಲ್‌ಗಳ ಕಿವಿ ಹಿಂಡಿದ ಕೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಖಾಸಗಿ ಸುದ್ದಿವಾಹಿನಿಗಳು ಸಂವೇದನಾಶೀಲ ಮತ್ತು ಪ್ರಚೋದನಕಾರಿ ವಿಷಯಗಳನ್ನು  ಪ್ರಸಾರ ಮಾಡುವುದರ ಕುರಿತು  ಕೇಂದ್ರ ಸರ್ಕಾರವು ಕಳವಳ ವ್ಯಕ್ತಪಡಿಸಿದೆ. ವಿಶೇಷವಾಗಿ ಜಹಾಂಗೀರ್ಪುರಿ ಗಲಭೆ ಮತ್ತು ರಷ್ಯಾ- ಉಕ್ರೇನ್‌ ಸಂಘರ್ಷದ ಕುರಿತಾಗಿ ಅಧಿಕೃತವಲ್ಲದ ಮಾಹಿತಿ ಬಿತ್ತರಿಸುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದಿದೆ.
ಈ ಕುರಿತು  ಚಾನೆಲ್‌ ಗಳಿಗೆ ಸಲಹೆ ನೀಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು “ಇತ್ತೀಚಿನ ವಿದ್ಯಮಾನಗಳ ಕುರಿತು ಕೆಲ ಸುದ್ದಿವಾಹಿನಿಗಳು ಅನಧಿಕೃತ, ತಪ್ಪುದಾರಿಗೆಳೆಯುವ, ಸಂವೇದನಾಶೀಲ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಭಾಷೆ ಮತ್ತು ಟೀಕೆಗಳನ್ನು ಬಳಸಿ, ಉತ್ತಮ ಅಭಿರುಚಿ ಮತ್ತು ಸಭ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಸಾರ ಮಾಡಿರುವುದು ಕಂಡುಬಂದಿದೆ. ಅಲ್ಲದೇ ಅಶ್ಲೀಲ,ಮಾನಹಾನಿಕರ ಮತ್ತು ಕೋಮುವಾದದ ಉಚ್ಚಾರಣೆಗಳನ್ನುಕೂಡ ಒಳಗೊಂಡಿದೆ. ಇವೆಲ್ಲವೂ ಕಾರ್ಯಕ್ರಮ ಸಂಹಿತೆಯ ಉಲ್ಲಂಘನೆಯಾಗಿದೆ” ಎಂದಿದೆ.
ಅದರಲ್ಲೂ ವಿಶೇಷವಾಗಿ ಹನುಮ ಜಯಂತಿಯಂದು ದೆಹಲಿಯ ಜಹಾಂಗೀರಪುರಿಯಲ್ಲಿ  ನಡೆದ ಕೋಮು ಘರ್ಷಣೆಯ ಕುರಿತು ಉಲ್ಲೇಖಿಸಿ ಸಮುದಾಯಗಳ ನಡುವೆ ಕೋಮು ದ್ವೇಷವನ್ನು ಪ್ರಚೋದಿಸುವ ಮತ್ತು ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಪ್ರಚೋದನಕಾರಿ ಶೀರ್ಷಿಕೆಗಳು ಮತ್ತು ಹಿಂಸಾಚಾರದ ವೀಡಿಯೊಗಳನ್ನು ಪ್ರಸಾರ ಮಾಡಲಾಗಿದೆ. ಕೆಲವು ವಾಹಿನಿಗಳು ಅಸಂಸದೀಯ, ಪ್ರಚೋದನಕಾರಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಭಾಷೆ, ಕೋಮು ಹೇಳಿಕೆಗಳು ಮತ್ತು ಅವಹೇಳನಕಾರಿ ಉಲ್ಲೇಖಗಳನ್ನು ಹೊಂದಿರುವ ಚರ್ಚೆಗಳನ್ನು ಪ್ರಸಾರ ಮಾಡುತ್ತವೆ, ಇದು ವೀಕ್ಷಕರ ಮೇಲೆ ನಕಾರಾತ್ಮಕ ಮಾನಸಿಕ ಪರಿಣಾಮ ಬೀರುತ್ತದೆ ಮತ್ತು ಕೋಮು ಸೌಹಾರ್ದತೆಯನ್ನು ಪ್ರಚೋದಿಸುತ್ತದೆ. ಅನೇಕ ಪತ್ರಕರ್ತರು ಮತ್ತು ಸುದ್ದಿ ನಿರೂಪಕರು ಪ್ರೇಕ್ಷಕರನ್ನು ಪ್ರಚೋದಿಸಲು ಕಪೋಲಕಲ್ಪಿತ ಹೇಳಿಕೆ ನೀಡುತ್ತಿದ್ದಾರೆ. ಕಾರ್ಯಕ್ರಮಗಳನ್ನು ಬಿತ್ತರಿಸುವಾಗ ಸೂಕ್ಷ್ಮ ವಿಚಾರಗಳನ್ನು ಗಮನಿಸಿ ಸಾಮಾಜಿಕ ಶಾಂತಿಗೆ ಧಕ್ಕೆ ಬಾರದಂತೆ ಎಚ್ಚರಿಕೆ ವಹಿಸುವಂತೆ ಕಿವಿಮಾತು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!