ಹೊಸದಿಗಂತ ವರದಿ ಮೈಸೂರು:
ಕನ್ನಡ ಸಾಹಿತ್ಯ ಲೋಕದ ಖ್ಯಾತ ವಿಮರ್ಶಕ ಜಿ.ಎಚ್.ನಾಯಕ್ (88) ಅವರು ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜಿ.ಎಚ್. ನಾಯಕ ಅವರಿಗೆ ಪತ್ನಿ ಮೀರಾ, ಪುತ್ರಿ ಕೀರ್ತಿ ಹಾಗೂ ಮೊಮ್ಮಗಳು ಇದ್ದಾರೆ ಕುವೆಂಪುನಗರದ ಕಾಮಾಕ್ಷಿ ಆಸ್ಪತ್ರೆ ಹಿಂಭಾಗದ ಮಾರುತಿ ದೇವಸ್ಥಾನದ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ವಾಸವಿದ್ದ ಅವರು
ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದರು.
ಜಿ.ಎಚ್. ನಾಯಕ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿದ್ದ ಅವರು ಜನಿಸಿದ್ದು 1935 ಸೆಪ್ಟಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿವಿಯ ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಹಂಪಿ ಕನ್ನಡ ವಿವಿ ಹಾಗೂ ಮೈಸೂರು ವಿವಿಯ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಹಿರಿಯ ಸ್ವಾತಂತ್ರ ಹೋರಾಟಗಾರ ದಿ. ಟಿ.ಎಸ್.ಸುಬ್ಬಣ್ಣ ಹಾಸ್ಟೆಲ್ ನಲ್ಲಿ ಬೆಳೆದು ಅವರ ನೆಚ್ಚಿನ ಶಿಷ್ಯರಾಗಿದ್ದರು.
ಸಾಹಿತ್ಯ ಕೃಷಿ ಮಾಡಿದ್ದ ಅವರು, ಸಮಕಾಲೀನ(1973), ಅನಿವಾರ್ಯ(1980), ನಿರಪೇಕ್ಷ(1984), ನಿಜದನಿ(1988), ಸಕಾಲಿಕ(1995), ಗುಣಗೌರವ(2002), ಹರಿಶ್ಚಂದ್ರ ಕಾವವ್ಯ ಓದು-ವಿಮರ್ಶೆ(2002), ದಲಿತ ಹೋರಾಟ: ಗಂಭೀರ ಸವಾಲುಗಳು(2004), ಸ್ಥಿತಪ್ರಜ್ಞೆ(2007), ಮತ್ತೆ ಮತ್ತೆ ಪಂಪ(2008), ಸಾಹಿತ್ಯ ಸಮೀಕ್ಷೆ(2009), ಉತ್ತರಾರ್ಧ(2011) ಅವರ ವಿಮರ್ಶಾ ಕೃತಿಗಳು. ಕನ್ನಡ ಸಣ್ಣ ಕಥೆಗಳು(1978), ಹೊಸಗನ್ನಡ ಕವಿತೆ(1985), ಶತಮಾನದ ಕನ್ನಡ ಸಾಹಿತ್ಯ ಸಂಪುಟ-2(2000), ಶತಮಾನದ ಕನ್ನಡ ಸಾಹಿತ್ಯ ಸಂಪುಟ-2 (2009) ಕೃತಿಗಳನ್ನು ಸಂಪಾದಿಸಿದ್ದಾರೆ.
ಜಿ.ಎಚ್.ನಾಯಕ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುನ್ನತ ಸಾಹಿತ್ಯ ವಿಮರ್ಶೆ ಪ್ರಶಸ್ತಿಯು ನಿರಪೇಕ್ಷ ಕೃತಿಗೆ, ವಿ.ಎಂ.ಇನಾಂದಾರ್ ವಿಮರ್ಶೆ ಪ್ರಶಸ್ತಿಯು ನಿಜದನಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪ ವಿಮರ್ಶೆ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ಮುಕ್ತ ವಿವಿ ಗೌರವ ಡಾಕ್ಟರೇಟ್ ಡಿ.ಲಿಟ್ ಪದವಿ, ತೀನಂಶ್ರೀ ವಿಮರ್ಶೆ ಪ್ರಶಸ್ತಿ ಸಂದಿವೆ.