ಹಳಸಿದ CSK- ಜಡೇಜಾ ಸಂಬಂಧ: ತಂಡ ತೊರೆಯಲು ಮುಂದಾದ ಜಡ್ಡು ಮೇಲೆ ಕಣ್ಣಿಟ್ಟಿದೆ ʼದೊಡ್ಡ ಪ್ರಾಂಚೈಸಿʼ..!

ಹೊಸಗಂತ ಡಿಜಿಟಲ್‌ ಡೆಸ್ಕ್
ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಮತ್ತೊಮ್ಮೆ ಬಯಲಾಗಿದೆ. ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್‌ ಸಿಎಸ್‌ಕೆ‌ ಸ್ಮರಣೀಯ ಗೆಲುವುಗಳಲ್ಲಿ ಭಾಗಿಯಾಗಿದ್ದ ಜಡೇಜಾ ಈ ಬಾರಿ ತಂಡದಿಂದ ಬೇರ್ಪಡಲು ಯೋಚಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಜಡೇಜಾ ಬೇರೆ ಫ್ರಾಂಚೈಸಿಗಳಿಂದ ಉತ್ತಮ ʼಡೀಲ್‌ʼ ಹುಡುಕುತ್ತಿದ್ದಾರೆ. ಜೊತೆಗೆ ಈ ಬಾರಿಯ ಹರಾಜಿನಲ್ಲಿ ಭಾಗಿಯಾಗಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. ಜಡೇಜಾ ಖರೀದಿಗೆ ಬಹುತೇಕ ಪ್ರಾಂಚೈಸಿಗಳು ಕಣ್ಣಿಟ್ಟಿದ್ದು, ಜಡೇಜಾ ನಿರ್ಧಾರದ ಬಗ್ಗೆ ಅಧಿಕೃತ ಮಾಹಿತಿಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.
ಮುಂದಿನ ಕೆಲವು ತಿಂಗಳುಗಳಲ್ಲಿ ವಿಶೇಷ ಬೆಳವಣಿಗೆಗಳು ನಡೆಯದಿದ್ದರೆ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತೊರೆಯುವುದು ಖಚಿತವಾಗಿದೆ. ಮೇ 2022 ರಲ್ಲಿ ಐಪಿಎಲ್ ಮುಕ್ತಾಯವಾದಾಗಿನಿಂದ ಜಡ್ಡು ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಿದ್ದಾರೆ ಎಂಬ ಮಾಹಿತಿಯಿದೆ. ಭಾರತ ತಂಡಕ್ಕೆ ಮರಳುವ ಮುನ್ನ ಎನ್‌ ಸಿಎಯಲ್ಲಿ ಯಲ್ಲಿ ಪುನರ್ವಸತಿ ಶಿಬಿರಕ್ಕೆ ಒಳಗಾಗಿದ್ದ  ಜಡೇಜಾ, ಚೆನ್ನೈ ಫ್ರಾಂಚೈಸಿ ಜೊತೆಗೆ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಜೊತೆಗೆ ಸಿಎಸ್ಕೆ ಜೊತೆಗಿನ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ.
ಸಿಎಸ್ಕೆಗೆ ಸಂಬಂಧಿಸಿದ Instagram ಪೋಸ್ಟ್‌ಗಳು ಡಿಲೀಟ್!
ಜಡೇಜಾ ಇತ್ತೀಚೆಗೆ ಸಿಎಸ್ಕೆ ಫ್ರಾಂಚೈಸಿಗೆ ಸಂಬಂಧಿಸಿದ ತನ್ನೆಲ್ಲಾ Instagram ಪೋಸ್ಟ್‌ಗಳನ್ನು ಅಳಿಸಿಹಾಕಿದ್ದು ತಂಡವನ್ನು ತೊರೆಯುತ್ತಿರುವುವ ಸುದ್ದಿಗೆ ಪುಷ್ಠಿ ಒದಗಿಸಿದೆ. ಜೊತೆಗೆ ಎಂಎಸ್ ಧೋನಿಯ ಹುಟ್ಟುಹಬ್ಬದ ಗೌರವಾರ್ಥವಾಗಿ ಫ್ರಾಂಚೈಸಿ ಬಿಡುಗಡೆ ಮಾಡಿದ ವೀಡಿಯೋದಲ್ಲೂ ಜಡ್ಡು ಗೈರಾಗಿದ್ದರು.
ಜಡೇಜಾ ಮುನಿಸಿಗೆ ಕಾರಣವೇನು?
2022ರ ಐಪಿಎಲ್‌ ಗೆ ಕೇವಲ 2 ದಿನಗಳು ಮಾತ್ರವೇ ಬಾಕಿಯಿದ್ದಾಗ ಮಹೇಂದ್ರ ಸಿಂಗ್‌ ಧೋನಿ ಅವರಿಂದ ನಾಯಕತ್ವ ಪಡೆದು ಜಡೇಜಾ ಅಚ್ಚರಿ ಮೂಡಿಸಿದ್ದರು. ಮೂಲಗಳ ಪ್ರಕಾರ ಜಡೇಜಾ ಒತ್ತಡಕ್ಕೆ ಮಣಿದು ಈ ನಾಯಕತ್ವ ಹಸ್ತಾಂತರ ನಡೆದಿತ್ತು. ಆದರೆ ನಾಯಕತ್ವ ವಹಿಸಿಕೊಂಡ ಬಳಿಕ ಜಡೇಜಾ ತೀವ್ರ ಒತ್ತಡದಲ್ಲಿದ್ದಂತೆ ಕಾಣುತ್ತಿದ್ದರು. ಜಡೇಜಾರ ನೈಜ ಆಟದ ಖದರ್ ಯಾವುದೇ ಪಂದ್ಯದಲ್ಲಿ ಹೊರಹೊಮ್ಮಲಿಲ್ಲ. ಬ್ಯಾಟ್ ಮತ್ತು ಬಾಲ್ ಎರಡೂ ವಿಭಾಗದಲ್ಲೂ ಜಡೇಜಾ ಸಂಪೂರ್ಣ ವಿಫಲರಾದರು. ಎಲ್ಲದಕ್ಕಿಂತ ಅಚ್ಚರಿಯೆಂದರೆ ಸರ್ವಶ್ರೇಷ್ಠ ಫೀಲ್ದರ್‌ ಎಂಬ ಖ್ಯಾತಿ ಗಳಿಸಿರುವ ಜಡೇಜಾ ಫೀಲ್ಡಿಂಗ್ ನಲ್ಲಿ ಪದೇ ಪದೇ ಪ್ರಮಾದವೆಸಗಿ ಸುಲಭ ಕ್ಯಾಚ್‌ ಗಳನ್ನು ಕೈಚೆಲ್ಲಿದರು. ಇದರ ಪರಿಣಾಮವಾಗಿ, ಅವರು ನಾಯಕನಾಗಿದ್ದ ಎಂಟು ಪಂದ್ಯಗಳಲ್ಲಿ ಆರರಲ್ಲಿ CSK ಹೀನಾಯವಾಗಿ ಸೋತಿತು. ತಂಡದ ಕಳಪೆ ಪ್ರದರ್ಶನದ ಕಾರಣ ನೀಡಿ ಜಡೇಜಾ ನಾಯಕತ್ವವನ್ನು ತ್ಯಜಿಸಿದರು. ಆ ಬಳಿಕ ಎಂ.ಎಸ್. ಧೋನಿ ಮತ್ತೆ ನಾಯಕನಾಗಿ ಪ್ರತಿಷ್ಠಾಪಿತರಾದರು.
ಆ ಬಳಿಕ ಪಕ್ಕೆಲುಬಿನ ಗಾಯಕ್ಕೊಳಗಾದ ಜಡೇಜಾ ಮುಂದಿನ ಪಂದ್ಯಗಳನ್ನು ಆಡಲಿಲ್ಲ. ಇದೇ ವೇಳೆ ಅವರು ಫ್ರಾಂಚೈಸಿಯೊಂದಿಗೆ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬ ವದಂತಿಗಳು ಕೇಳಿಬಂದಿದ್ದವು.
ಇತ್ತೀಚಿನ ದಿನಗಳಲ್ಲಿ ರವೀಂದ್ರ ಜಡೇಜಾ ಅವರ ನಡೆಗಳು ಚೆನೈ ಪ್ರಂಚೈಸಿ ತೊರೆಯುವ ಅನುಮಾನವನ್ನು ದಟ್ಟವಾಗಿಸಿವೆ. ಮುಂಬರುವ ಐಪಿಎಲ್‌ನಲ್ಲಿ ಆಡುವುದಾಗಿ ಧೋನಿ ಈಗಾಗಲೇ ಘೋಷಿಸಿರುವುದರಿಂದ ಹಾಗೂ ಅವರೇ ತಂಡದ ನಾಯಕನಾಗಿರುವುದು ಖಚಿತವಾದ್ದರಿಂದ ಜಡೇಜಾ ಮತ್ತೆ ಸಿಎಸ್‌ ಕೆ ತಂಡದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ನಡುವೆ ಜಡೇಜಾ ರ ಮೇಲೆ ಕಣ್ಣಿಟ್ಟ “ದೊಡ್ಡ ಫ್ರಾಂಚೈಸಿಯೊಂದುʼ ಜಡೇಜಾರನ್ನು ಈಗಾಗಲೇ ಸಂಪರ್ಕಿಸಿದ್ದು, ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಮಾತುಕತೆಯನ್ನು ಯಶಸ್ವಿಯಾಗಿ ನಡೆಸಿದೆ ಎಂಬ ಸುದ್ದಿಗಳು ಹೊರಬಿದ್ದಿವೆ.
ಜಡೇಜಾರನ್ನು ಭೇಟಿ ಮಾಡಿ ಭೇಟಿ ಮಾಡಿ ಅವರನ್ನು ಸಮಾಧಾನಪಡಿಸಲು ಮತ್ತು ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ನ ಹಿರಿಯ ಅಧಿಕಾರಿಗಳು ಕೊನೆಯ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ. 2012ರಲ್ಲಿ CSK ಸೇರಿದ್ದ ಜಡೇಜಾ ಅಂದಿನಿಂದ ತಂಡದಲ್ಲಿದ್ದಾರೆ. ಸಿಎಸ್‌ಕೆ ಎರಡು ವರ್ಷಗಳ ಕಾಲ ನಿಷೇಧಿಸಲ್ಪಟ್ಟಾಗ ಅವರು ಗುಜರಾತ್ ಲಯನ್ಸ್‌ಗಾಗಿ ಆಡಿದ್ದರು. 2018 ಮತ್ತು 2021 ರಲ್ಲಿ ಸಿಎಸ್ಕೆ ಕಪ್‌ ಗೆದ್ದಾಗ ತಂಡದ ಅವಿಭಾಜ್ಯ ಅಂಗವಾಗಿದ್ದ ಜಡೇಜಾ ಎರಡು ಬಾರಿ ಯಶಸ್ಸನ್ನು ಕಂಡಿದ್ದಾರೆ. ಭಾರತ ತಂಡದ ಖಾಯಂ ಆಟಗಾರನಾಗಿ ವಿಶ್ವ ಶ್ರೇಷ್ಠ ಆಲ್ರೌಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಜಡೇಜಾ ಒಂದು ವೇಳೆ ಹರಾಜಿಗೆ ಬಂದರೆ ಅತಿಹೆಚ್ಚಿನ ಮೊತ್ತಕ್ಕೆ ಬಿಡ್‌ ಆಗುವುದರಲ್ಲಿ‌ ಯಾವುದೇ ಅಚ್ಚರಿಯಿಲ್ಲ. ಜಡೇಜಾರನ್ನು ತಂಡಕ್ಕೆ ಕರೆತನ್ನಿ ಎಂದು ಈಗಾಗಲೇ ಆರ್ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಂಡದ ಮ್ಯಾನೇಜ್‌ ಮೆಂಟ್‌ ಗೆ ಮನವಿ ಇಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!