ಸರ್ಕಾರಿ ಜಮೀನಿನಲ್ಲಿರುವ ಅಕ್ರಮ ಶಿಲುಬೆ ತೆರವಿಗೆ ಆಗ್ರಹ

ಹೊಸದಿಗಂತ ವರದಿ,ಚಿಕ್ಕಮಗಳೂರು:

ಸರ್ಕಾರಿ ಜಮೀನಿನಲ್ಲಿರುವ ಅಕ್ರಮ ಶಿಲುಬೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಎನ್.ಆರ್.ಪುರ ಪಟ್ಟಣದಿಂದ ಕರಗುಂದ ಗ್ರಾಮ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಪಟ್ಟಣದ ಉಮಾಮೇಶ್ವರಿ ದೇವಸ್ಥಾನದ ಬಳಿಯೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಬಜರಂಗದಳ ಕಾರ್ಯಕರ್ತರು ಸ್ಥಳದಲ್ಲೇ ಧರಣಿ ಕುಳಿತು, ಪೊಲೀಸರೇ ಕರಗುಂದಕ್ಕೆ ತೆರಳಿ ಅಲ್ಲಿ ಸರ್ಕಾರಿ ಜಮೀನಿನಲ್ಲಿರುವ ಅಕ್ರಮ ಶಿಲುಬೆಯನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ಅಲ್ಲಿಗೆ ತೆರಳಲು ನಮಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಪೊಲೀಸರು ಅದಕ್ಕೆ ಅವಕಾಶ ನೀಡದೆ ಇಲ್ಲಿಯೇ ಮನವಿ ನೀಡುವಂತೆ ತಿಳಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ವೇಳೆ ಮಾತನಾಡಿದ ಬಜರಂಗದಳ ಮುಖಂಡರು, ತಾಲೂಕಿನ ಕಡಹಿನಬೈಲು ಗ್ರಾಮದ ಕರಗುಂದ ಎಂಬಲ್ಲಿ ಅನಧಿಕೃತವಾಗಿ ಶಿಲುಬೆಯನ್ನು ನಿಲ್ಲಿಸಲಾಗಿದೆ. ಎನ್.ಆರ್ ಪುರ ಭಾಗದಲ್ಲಿ ಕ್ರೈಸ್ತ ಮಿಷನರಿಗಳು ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶಿಲುಬೆಗಳನ್ನು ನಿಲ್ಲಿಸಿ ಜಾಗವನ್ನು ಒಳ ಹಾಕುತ್ತಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಚರ್ಚ್‌ಗಳನ್ನು ಹೊಂದಿರುವ ತಾಲೂಕು ಎನ್.ಆರ್ ಪುರ ಆಗಿದೆ. ತಾಲೂಕಿನಲ್ಲಿ ಅನಧಿಕೃತವಾಗಿರುವ ಶಿಲುಬೆ ತೆರವುಗೊಳಿಸುವ ಕಾರ್ಯ ಇಲಾಖೆಯಿಂದ ಆಗಬೇಕಿದೆ ಎಂದು ಒತ್ತಾಯಿಸಿದರು.
ಕರಗುಂದ ಸರ್ವೆ ನಂ.೫೬ರಲ್ಲಿ ಸರ್ಕಾರಿ ಕೆರೆ ಜಾಗವನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಶಿಲುಬೆಯನ್ನು ಸ್ಥಾಪಿಸಲಾಗಿದೆ ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಕೊನೆಗೆ ಪೊಲೀಸರು ಬಜರಂಗದಳ ಪ್ರಾಂತ್ಯ ಸಂಚಾಲಕ ರಘು ಸಕಲೇಶಪುರ, ಮುಖಂಡರುಗಳಾದ ಆರ್.ಡಿ ಮಹೇಂದ್ರ, ಶಶಾಂಕ್, ಪುರುಷೋತ್ತಮ್ ಸೇರಿ ಹಲವು ಕಾರ್ಯಕರ್ತರನ್ನು ಬಂಧಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!