Sunday, June 4, 2023

Latest Posts

ಶೀಘ್ರವೇ ಗಿರಿ ತಪ್ಪಲಿನ ಪ್ರವಾಸಿ ತಾಣಗಳಿಗೆ ಖಾಸಗಿ ವಾಹನಗಳ ನಿರ್ಬಂಧ: ಜಿಲ್ಲಾಧಿಕಾರಿ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಗಿರಿ ತಪ್ಪಲಿನ ಪ್ರವಾಸಿ ತಾಣಗಳಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಟ್ಯಾಕ್ಸಿ ವಾಹನಗಳನ್ನು ಹೊರತುಪಡಿಸಿ ಪ್ರವಾಸಕ್ಕೆ ಬರುವವರ ಖಾಸಗಿ ವಾಹನಗಳನ್ನು ಶಾಶ್ವತವಾಗಿ ನಿರ್ಬಂಧಿಸುವ ಕ್ರಮವನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನ ಗಿರಿ ಸೇರಿದಂತೆ ಗಿರಿ ಪ್ರದೇಶದ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಟ್ರಾಫಿಕ್ ಜಾಮ್‌ನಂತಹ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಬಾಡಿಗೆ ಟ್ಯಾಕ್ಸಿಗಳಲ್ಲಿ ಪ್ರವಾಸಕ್ಕೆ ಬರುವವನ್ನು ಹೊರತುಪಡಿಸಿ ಪ್ರವಾಸಿಗರ ಖಾಸಗಿ ವಾಹನಗಳನ್ನು ಕೈಮರದ ಬಳಿಯೇ ನಿಲುಗಡೆ ಗೊಳಿಸಿ ಜಿಲ್ಲಾಡಳಿತ ಅನುಮತಿ ನೀಡಿದ ಜೀಪುಗಳಲ್ಲಿ ಪ್ರವಾಸಿಗರನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪಾರ್ಕಿಂಗ್ ವ್ಯವಸ್ಥೆ ಮಾಡಲು ಜಮೀನನ್ನು ಸಹ ಗುರುತಿಸಲಾಗಿದೆ. ಅಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನೂ ಕಲ್ಪಿಸಲಾಗುವುದು. ಇನ್ನು ಹತ್ತು ದಿನಗಳಲ್ಲಿ ಕ್ರಿಯಾ ಯೋಜನೆ ಮುಗಿಯಲಿದೆ. ನಂತರ ಗಿರಿ ಪ್ರದೇಶಕ್ಕೆ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗುವುದು ಎಂದರು.
ಕೈಮರದಿಂದ ಗಿರಿ ಪ್ರದೇಶದ ತಾಣಗಳಿಗೆ ಕರೆದೊಯ್ಯಲು ಜೀಪುಗಳಿಗೆ ಜಿಲ್ಲಾಡಳಿತವೇ ದರ ನಿಗದಿಪಡಿಸುತ್ತದೆ. ಅದರಿಂದ ಬರುವ ಆದಾಯವನ್ನು ಪ್ರವಾಸಿ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಇದರಿಂದ ಒಂದಷ್ಟು ಮಂದಿಗೆ ಉದ್ಯೋಗವೂ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಇದಲ್ಲದೆ ಕೆಮ್ಮಣ್ಣುಗುಂಡು ಭಾಗದಲ್ಲಿರುವಂತೆ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜ್‌ನ್ನು ಮುತ್ತೋಡಿ ಭಾಗದಲ್ಲಿ ತೆರದು ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಆಲೋಚನೆಯೂ ಇದೆ. ಇದರಿಂದ ಜಂಗಲ್ ಲಾಡ್ಜ್‌ಗಳಲ್ಲಿ ತಂಗುವ ಜೊತೆಗೆ ಸಫಾರಿ ನಡೆಸಲು ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಿದ್ದೇವೆ. ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳು ಹಾಗೂ ಜಂಗಲ್ ಲಾಡ್ಜ್ ಸಂಸ್ಥೆ ಇಬ್ಬರೂ ಒಪ್ಪಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!