ವ್ಯಾಟ್ಸ್ಆ್ಯಪ್‌ ಗೆ ಬಂದ ಲಿಂಕ್ ಕ್ಲಿಕ್ ಮಾಡಿದ ನಿವೃತ್ತ ಶಿಕ್ಷಕಿಗೆ ಶಾಕ್: ಕೆಲವೇ ಕ್ಷಣಗಳಲ್ಲಿ ಖಾತೆಯಿಂದ 21 ಲಕ್ಷ ರೂ. ಗುಳುಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವ್ಯಾಟ್ಸ್ಆ್ಯಪ್‌ಗೆ ಬರುವ ಅನಾಮಿಕರ ಲಿಂಕ್ ಕ್ಲಿಕ್ ಮಾಡಿದ್ದ ನಿವೃತ್ತ ಶಿಕ್ಷಕಿಯೊಬ್ಬರಿಗೆ ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಯ 21 ಲಕ್ಷ ರೂಪಾಯಿ ವಿಥ್‌ಡ್ರಾ ಮಾಡಲಾಗಿದೆ ಅನ್ನೋ ಬ್ಯಾಂಕ್ ಮೆಸೇಜ್ ಬಂದಿದೆ. ಈ ಕುರಿತು ತಮ್ಮ ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಿದಾಗಿ ಶಿಕ್ಷಕಿಗೆ ಆಘಾತವಾಗಿದೆ.

ಈ ಘಟನೆ ನಡೆದಿರುವುದು ಆಂಧ್ರ ಪ್ರದೇಶದ ಮದನಪಲ್ಲೆ ಪಟ್ಟಣದ ರೆಡ್ಡಿಪ್ಪನಾಯ್ಡು ಕಾಲೋನಿಯಲ್ಲಿ ನಡೆದಿದೆ. ಇದೀಗ ನಿವೃತ್ತ ಶಿಕ್ಷಕಿ ವರಲಕ್ಷ್ಮಿ ತಮ್ಮ ಹಣವನ್ನು ಸೈಬರ್ ವಂಚಕರಿಂದ ವಾಪಸ್ ಕೊಡಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶಿಕ್ಷಕಿ ವರಲಕ್ಷ್ಮಿ ಇತ್ತೀಚೆಗೆಷ್ಟೇ ನಿವೃತ್ತಿಯಾಗಿದ್ದರು. ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕಿಗೆ ವಿಮೆ, ಪಿಎಫ್ ಸೇರಿದಂತೆ ಇತರ ಎಲ್ಲಾ ಮೊತ್ತ ಸೇರಿದಂತೆ ಒಟ್ಟು 21 ಲಕ್ಷ ರೂಪಾಯಿ ಬಂದಿದೆ. ತಮ್ಮ ದೈನಂದಿನ ಖರ್ಚು, ಆಸ್ಪತ್ರೆ ಖರ್ಚು ವೆಚ್ಚ ಎಲ್ಲವೂ ಇದರಿಂದಲೇ ನಡೆದು ಹೋಗಲಿದೆ. ಮುಂದಿನ ಜೀವನ ನೆಮ್ಮದಿಯಿಂದ ಮನೆಯಲ್ಲಿರಬೇಕು ಎಂದುಕೊಂಡಿದ್ದ ಶಿಕ್ಷಕಿಗೆ ಇದೀಗ ನೆಮ್ಮದಿಯೇ ಇಲ್ಲದಾಗಿದೆ. ನಿವೃತ್ತಿಯಾದ ಬಳಿಕ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದ ವರಲಕ್ಷ್ಮಿ ವ್ಯಾಟ್ಸ್ಆ್ಯಪ್‌ನಲ್ಲಿ ಲಿಂಕ್ ಒಂದು ಬಂದಿದೆ.

ಮನೆಯಲ್ಲಿದ್ದ ವರಲಕ್ಷ್ಮೀ ಲಿಂಕ್ ಕ್ಲಿಕ್ ಮಾಡಿದ್ದಾರೆ. ಶಿಕ್ಷಕಿಯ ವ್ಯಾಟ್ಸ್ಆ್ಯಪ್ ಖಾತೆ ನಂಬರ್ ಬ್ಯಾಂಕ್ ಖಾತೆಗೂ ಲಿಂಕ್ ಆಗಿದೆ. ಇದರಿಂದ ಸೈಬರ್ ವಂಚಕರು ಸುಲಭವಾಗಿ ಶಿಕ್ಷಕಿಯ ಖಾತೆಯಲ್ಲಿದ್ದ 21 ಲಕ್ಷ ರೂಪಾಯಿ ಎಗರಿಸಿದ್ದಾರೆ.

ಕ್ಲಿಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಶಿಕ್ಷಕಿಯ ಮೊಬೈಲ್‌ಗೆ ಬ್ಯಾಂಕ್‌ನಿಂದ ಸಂದೇಶ ಬಂದಿದೆ. ನಿಮ್ಮ ಬ್ಯಾಂಕ್ ಖಾತೆಯ 21 ಲಕ್ಷ ರೂಪಾಯಿ ಹಣ ಹಿಂಪಡೆಯಲಾಗಿದೆ ಅನ್ನೋ ಸಂದೇಶ ಶಿಕ್ಷಕಿಯ ಅನುಮಾನ ಹೆಚ್ಚಿಸಿದೆ. ತಕ್ಷಣವೇ ತಮ್ಮ ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ಪರಿಶೀಲಿಸಿದಾಗ 21 ಲಕ್ಷ ರೂಪಾಯಿ ಹಣ ಕಳುವಾಗಿರುವುದು ಪತ್ತೆಯಾಗಿದೆ. ಇದರಿಂದ ಶಿಕ್ಷಕಿ ಆಘಾತಕ್ಕೊಳಗಾಗಿದ್ದಾರೆ.

ಸಿಬ್ಬಂದಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಚೇತರಿಸಿಕೊಂಡ ಶಿಕ್ಷಕಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇತ್ತೀಚಗೆ ಸಾಫ್ಟ್‌ವೇರ್ ಉದ್ಯೋಗಿಯ ಖಾತೆಯಿಂದ ಇದೇ ರೀತಿ 12 ಲಕ್ಷ ರೂಪಾಯಿ ಕಳುವು ಮಾಡಲಾಗಿತ್ತು. ಈ ಕುರಿತು ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ರೀತಿ ಹಲವು ಪ್ರಕರಣಗಳು ದಾಖಲಾಗಿದ್ದು, ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!