ಭ್ರಷ್ಟ ನಾಯಕರು ಪಶ್ಚಿಮ ಬಂಗಾಳದ ಬಡ ಜನರಿಂದ ಲೂಟಿ ಮಾಡಿದ ಹಣ ವಾಪಸ್‌: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಟಿಎಂಸಿ ಸರಕಾರದ ಭ್ರಷ್ಟ ನಾಯಕರು ಬಡವರಿಂದ ಸುಲಿಗೆ ಮಾಡಿದ್ದ 3000 ಕೋಟಿ ರೂ. ಗಳನ್ನು ಇ.ಡಿ ಸ್ವಾಧಿನಪಡಿಸಿದ್ದು, ಈ ದುಡ್ಡನ್ನು ಮರಳಿ ಬಡವರಿಗೆ ನೀಡುವುದು ತನ್ನ ಧ್ಯೇಯ ಮತ್ತು ಈ ನಿಟ್ಟಿನಲ್ಲಿ ಅಗತ್ಯ ಬಿದ್ದಲ್ಲಿ ಕಾನೂನು ಅವಕಾಶಗಳನ್ನು ಬಳಸಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೃಷ್ಣನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜಮನೆತನದವರಾದ ಅಮೃತಾ ರಾಯ್‌ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಮೋದಿ ಅವರು, ಪ.ಬಂಗಾಳದ ಬಡ ಜನರು ಉದ್ಯೋಗ ಪಡೆಯಲು ಭ್ರಷ್ಟ ಅಧಿಕಾರಿಗಳಿಗೆ ನೀಡಿದ ಲಂಚದ ಮೊತ್ತ ಬರೋಬ್ಬರಿ 3 ಸಾವಿರ ಕೋಟಿ ರೂಗಳಷ್ಟಿದೆ. ಅಧಿಕಾರಕ್ಕೆ ಮರಳಿದ ಕೂಡಲೇ ಈ ದುಡ್ಡನ್ನು ಬಡವರಿಗೆ ಮರಳಿಸಲಾಗುವುದು ಎಂದು ಬಡ ಜನರಿಗೆ ತಿಳಿಸಿಬಿಡಿ. ಇದು ತನ್ನ ದೃಢ ಸಂಕಲ್ಪ ಎಂದು ಪ್ರಧಾನಿ ಸಂಭಾಷಣೆ ವೇಳೆ ತಿಳಿಸಿದರು.

ಹಿಂದೆ ಆಪ್ ಪಕ್ಷವನ್ನು ದೂರುತ್ತಿದ್ದ ಕಾಂಗ್ರೆಸಿಗರು ಇದೀಗ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೈಲು ಸೇರುತ್ತಲೇ ವರಸೆ ಬದಲಿಸಿ, ಕೇಜ್ರಿವಾಲ್‌ರನ್ನು ಬೆಂಬಲಿಸತೊಡಗಿದ್ದಾರೆ ಎಂದು ಪ್ರಧಾನಿ ನಿರ್ದಿಷ್ಟ ನಾಯಕರ ಹೆಸರು ಉಲ್ಲೇಖಿಸದೆ ಆರೋಪಿಸಿದರು.

ವಿಪಕ್ಷಗಳಿಗೆ ಅಧಿಕಾರ ಮುಖ್ಯ ವಿನಾ ದೇಶವಲ್ಲ ಎಂಬುದಕ್ಕೆ ಇದು ಜ್ವಲಂತ ನಿದರ್ಶನ. ಭ್ರಷ್ಟ ನಾಯಕರೆಲ್ಲರು ಪರಸ್ಪರರ ರಕ್ಷಣೆಗೆ ಒಂದಾಗಿದ್ದಾರೆ. ಇನ್ನೊಂದೆಡೆ ಬಿಜೆಪಿ ನೇತೃತ್ವದ ಮಿತ್ರಕೂಟ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಮತ್ತು ಯುವಪೀಳಿಗೆಯ ಭವ್ಯ ಭವಿಷ್ಯಕ್ಕಾಗಿ ಹೋರಾಡುತ್ತಿದೆ ಎಂದು ವಾಸ್ತವವನ್ನು ಪ್ರಧಾನಿ ವಿವರಿಸಿದರು.

18ನೇ ಶತಮಾನದಲ್ಲಿ ಸ್ಥಳೀಯ ದೊರೆಯಾಗಿದ್ದ ಕೃಷ್ಣಚಂದ್ರ ರಾಯ್ ಅವರ ವಂಶದವರು ಅಮೃತಾ ರಾಯ್. ಈಕೆಗೆ ಬಿಜೆಪಿ ಟಿಕೆಟ್ ನೀಡಿದ ಬೆನ್ನಲ್ಲೇ, ರಾಯ್ ಅವರ ನಿಕಟಪೂರ್ವ ದೊರೆ ಕುಟುಂಬ ಬ್ರಿಟಿಷರಿಗೆ ಬೆಂಬಲ ನೀಡಿತ್ತೆಂದು ಕೆಲವರು ಟಾರ್ಗೆಟ್ ಮಾಡುತ್ತಿರುವುದು ತೀರಾ ದುರದೃಷ್ಟಕರ ಎಂದು ಪ್ರಧಾನಿ ವಿಶಾದಿಸಿದರು.

ನಮ್ಮ ಕುಟುಂಬವನ್ನು ದೇಶದ್ರೋಹಿಗಳೆಂದು ನಿಂದಿಸಲಾಗುತ್ತಿದೆ. ವಾಸ್ತವದಲ್ಲಿ ದೊರೆ ಕೃಷ್ಣಚಂದ್ರ ರಾಯ್ ಜನರ ಕಲ್ಯಾಣಕ್ಕಾಗಿ ದುಡಿದವರು ಮತ್ತು ಇತರ ರಾಜರ ಜತೆ ಸೇರಿಕೊಂಡು ಸನಾತನ ಧರ್ಮ ರಕ್ಷಣೆಗೆ ಹೋರಾಡಿದವರು ಎಂದು ರಾಯ್ ಪ್ರಧಾನಿಗೆ ಮಾಹಿತಿ ನೀಡಿದರು.

ಟೀಕೆಗಳಿಂದ ಒತ್ತಡಕ್ಕೊಳಗಾಗದಿರಿ. ಅವರು (ಟಿಎಂಸಿ) ವೋಟ್ ಬ್ಯಾಂಕ್ ಪಾಲಿಟಿಕ್ಸ್‌ನಲ್ಲಿ ತೊಡಗಿದವರು. ಇದಕ್ಕಾಗಿ ಎಲ್ಲಾ ತೆರನಾದ ಕ್ರೂರ ನಿಂದೆ ಮಾಡಲು ಹೇಸದವರು ಮತ್ತು ತಮ್ಮ ಪಾಪಕೃತ್ಯಗಳನ್ನು ಮುಚ್ಚಲು ಈ ತೆರ ನಿಂದೆ ಮಾಡುತ್ತಿದ್ದಾರೆ. ಭಗವಾನ್ ಶ್ರೀರಾಮಚಂದ್ರನ ಅಸ್ತಿತ್ವಕ್ಕೆ ಸಾಕ್ಷಿ ಏನಿದೆ ಎಂದು ಕೇಳುವ ಇವರು, ಮಗದೊಮ್ಮೆ ಎರಡು ಮೂರನೇ ಶತಮಾನದ ಘಟನಾವಳಿಗಳನ್ನು ಉಲ್ಲೇಖಿಸಿ ಇತರರ ತೇಜೋವಧೆಗೆ ಶ್ರಮಿಸುತ್ತಾರೆ. ಇದವರ ದ್ವಂದ್ವ ನೀತಿ ಎಂದು ರಾಯ್‌ಗೆ ಮನವರಿಕೆ ಮಾಡಿದ ಪ್ರಧಾನಿ ನಮೋ, ದೊರೆ ಕೃಷ್ಣಚಂದ್ರ ರಾಯ್ ಅವರ ಸಾಮಾಜಿಕ ಸುಧಾರಣೆಗಳು, ಅಭಿವೃದ್ಧಿ ಸಾಧನೆಗಳು, ಪರಂಪರೆಯನ್ನು ಪ್ರಶಂಸಿಸಿದರು ಮತ್ತು ಅವರ ದಂತಕತೆಯನ್ನು ಮುಂದುವರೆಸುವಂತೆ ಸಲಹೆಯಿತ್ತರು.

ಚುನಾವಣೆಯಲ್ಲಿ ರಾಯ್ ವಿಜಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, ಬಂಗಾಳದ ಪರಂಪರೆಯನ್ನು ರಕ್ಷಿಸುವ ಸವಾಲು ನಿಮ್ಮ ಮೇಲಿದೆ. ಕ್ಷೇತ್ರಕ್ಕೆ ಸಂಬಂಧಿಸಿ ಮೊದಲ 100 ದಿನಗಳ ಉಪಕ್ರಮಗಳ ಪಟ್ಟಿ ಮಾಡಿಕೊಳ್ಳಿ ಎಂದು ಸಲಹೆಯಿತ್ತರು. ಪ.ಬಂಗಾಳದ ಜನತೆ ಈ ಬಾರಿ ಪರಿವರ್ತನೆಗಾಗಿ ಮತ ಚಲಾಯಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಮೋದಿ ಸರಕಾರದ ಕಾರ್ಯ ವೈಖರಿ ಬಗ್ಗೆ ನಮಗೆ ತುಂಬು ಆತ್ಮವಿಶ್ವಾಸವಿದೆ, ಅಭಿಮಾನವಿದೆ. ಏಕಕಾಲಕ್ಕೆ ಲಂಚಕ್ಕಾಗಿ ಉದ್ಯಮಿಯನ್ನು ತನ್ನ ಸ್ನೇಹಿತನನ್ನಾಗಿ ಪರಿವರ್ತಿಸಿಕೊಂಡು ,ತನ್ನ ಸಂಸದೀಯ ಲಾಗ್ ಇನ್ ಬಳಸಲು ಆತನಿಗೆ ಅವಕಾಶ ಕಲ್ಪಿಸಿ, ಇದೀಗ ಭ್ರಷ್ಟಾಚಾರ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಟಿಎಂಸಿಯ ಪದಚ್ಯುತ ಸಂಸದೆ ಮೊಯಿತ್ರಾ ನೇರ ಜೈಲು ಸೇರಲಿದ್ದಾಳೆ ಎಂದು ಪ.ಬಂಗಾಳದ ಜನತೆ ತನಗೆ ತಿಳಿಸಿದ್ದಾರೆಂದಾಗ ಪ್ರಧಾನಿ ನಮೋ ನಕ್ಕುಬಿಟ್ಟರು. ಟಿಎಂಸಿ ಸರಕಾರದ ಭ್ರಷ್ಟಾಚಾರ ಮತ್ತು ಪೊಳ್ಳು ಭರವಸೆಗಳ ಬಗ್ಗೆ ಜನರು ತುಂಬು ಆಕ್ರೋಶಿತರಾಗಿದ್ದಾರೆ ಎಂದು ರಾಯ್ ಪ್ರಧಾನಿಗೆ ಮನವರಿಕೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!