ಹೊಸದಿಗಂತ ಡಿಜಿಟಲ್ ಡೆಸ್ಕ್
ಕತಾರ್‌ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಅನುಭವಿಸಿದ ಹೀನಾಯ ಸೋಲು ಬೆಲ್ಜಿಯಂ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಕೋಪೋದ್ರಿಕ್ತ ಅಭಿಮಾನಿಗಳು ಬ್ರಸೆಲ್ಸ್‌ನಲ್ಲಿ ಕಾರು ಮತ್ತು ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದ್ದು, ಬೆಲ್ಜಿಯಂ ಪೊಲೀಸರು ಈ ಸಂಬಂಧ 13 ಜನರನ್ನು ಬಂಧಿಸಿದ್ದಾರೆ.
ವಿಶ್ವಕಪ್ ನಲ್ಲಿ ಬೆಲ್ಜಿಯಂ ಸೋಲುತ್ತಿದ್ದಂತೆ ರಾಜಧಾನಿಯಾದ್ಯಂತ ಹಲವಾರು ಸ್ಥಳಗಳಲ್ಲಿ ಗಲಭೆಗಳು ನಡೆದವು. ಅಲ್ಲಿ ಹಲವಾರು ಅಭಿಮಾನಿಗಳು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.
“ಸಂಜೆ 7 ಗಂಟೆಯ ಸುಮಾರಿಗೆ ಶಾಂತತೆ ಮರಳಿತು ಮತ್ತು ಸಂಬಂಧಪಟ್ಟ ವಲಯಗಳಲ್ಲಿ ತಡೆಗಟ್ಟುವ ಗಸ್ತುಗಳು ಜಾರಿಯಲ್ಲಿವೆ” ಎಂದು ಪೊಲೀಸ್ ವಕ್ತಾರ ಇಲ್ಸೆ ವ್ಯಾನ್ ಡಿ ಕೀರೆ ಹೇಳಿದರು.
“ಗಲಭೆಕೋರರು ಪೈರೋಟೆಕ್ನಿಕ್ ವಸ್ತುಗಳು, ಸ್ಪೋಟಕಗಳು, ಕೋಲುಗಳನ್ನು ಬಳಸಿದರು ಮತ್ತು ಸಾರ್ವಜನಿಕ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿದರು” ಈ ವೇಳೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸ್ಫಟದಿಂದ ಪತ್ರಕರ್ತರೊಬ್ಬರ ಮುಖಕ್ಕೆ ಗಾಯವಾಗಿದೆ. ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗ ನಡೆಸಿ ಗಲಭೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ