ನದಿ ಪುನಶ್ಚೇತನ-ಹೂಳೆತ್ತುವ ಕಾಮಗಾರಿಗೆ ಶೀಘ್ರವೇ ಚಾಲನೆ: ಗೋವಿಂದ ಕಾರಜೋಳ

ಹೊಸದಿಗಂತ ವರದಿ ಮಡಿಕೇರಿ:  

ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು. ವಿವಿಧ ಜಿಲ್ಲೆಗಳಲ್ಲಿ‌ ಉಂಟಾಗಿರುವ ಮಳೆಹಾನಿ ಪರಿಶೀಲನೆ ಸಂಬಂಧ ಹಮ್ಮಿಕೊಂಡಿರುವ ಪ್ರವಾಸ ಕಾರ್ಯಕ್ರಮದ‌ ಅಂಗವಾಗಿ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಅಣೆಕಟ್ಟೆ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ರೂ 130 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಮತ್ತು ನದಿ ಪುನಶ್ಚೇತನ ಕಾರ್ಯಕ್ರಮಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು. ಜನರ ಜೀವನಾಡಿಯಾಗಿರುವ ನದಿಗಳು ಕಲುಷಿತಗೊಳ್ಳದಂತೆ ಮತ್ತು‌ ನದಿ, ಕೆರೆಗಳ ಒತ್ತುವರಿ ತಡೆಗಟ್ಟಲು ಜನಜಾಗೃತಿ ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಪ್ರಧಾನಿ ಅವರ ನದಿ ಹಬ್ಬ ಚಿಂತನೆಗೂ ಮುಂದಿನ ದಿನಗಳಲ್ಲಿ ಚಾಲನೆ‌ ನೀಡಲಾಗುವುದು ಎಂದರು.

ಇದೇ ಸಂದರ್ಭ ಹಾರಂಗಿ ಅಣೆಕಟ್ಟೆಗೆ ಸಂಪರ್ಕ‌ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೂಡುಮಂಗಳೂರು ಗ್ರಾಪಂ‌ ಉಪಾಧ್ಯಕ್ಷ ಭಾಸ್ಕರ್ ನಾಯಕ್ ನೀಡಿದ ಮನವಿಗೆ ಸ್ಪಂದಿಸಿದ ಅವರು ಕೂಡಲೇ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದರು.

ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾರಜೋಳ, ನಮ್ಮ‌ ಪೂರ್ವಜರು ನಮಗೆ ಸುಸಂಸ್ಕೃತ ಮೌಲ್ಯಗಳನ್ನು ಬಿಟ್ಟು ಹೋಗಿದ್ದು, ನಾವು ಅದನ್ನು ತಪ್ಪದೆ ಪಾಲಿಸಬೇಕಿದೆ.‌ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಯಾವುದೇ ಪ್ರಕರಣಕ್ಕೆ ಆಸ್ಪದ‌ ನೀಡಬಾರದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!