ಬೃಹತ್ ಗಾತ್ರದ ಸರಕು ತುಂಬಿಕೊಂಡು ರಸ್ತೆಗಿಳಿದ ಲಾರಿಗಳು: ಇತರೆ ವಾಹನಗಳಿಗೆ ಕಿರಿಕಿರಿ

ದಿಗಂತ ವರದಿ ಅಂಕೋಲಾ:

ಬೃಹತ್ ಗಾತ್ರದ ಸರಕನ್ನು ತುಂಬಿ ಮಂಗಳೂರು ಕಡೆಯಿಂದ ಅಂಕೋಲಾ ಕಡೆ ಸಂಚರಿಸಿದ ಎರಡು ಲಾರಿಗಳು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇತರೆ ವಾಹನಗಳ ಚಾಲಕರಿಗೆ ಕಿರಿಕಿರಿಯಾಗಿ ಪರಿಣಮಿಸಿದ ಘಟನೆ ಬುಧವಾರ ಸಂಜೆ ನಡೆದಿದ್ದು ಅಪಾಯಕಾರಿ ರೀತಿಯಲ್ಲಿ ಸಂಚರಿಸಿದ ಲಾರಿಗಳ ಕುರಿತು ಕೆಲವು ವಾಹನಗಳ ಚಾಲಕರು ಬಸ್ ಪ್ರಯಾಣಿಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರುವ ಒಂದು ಲಾರಿಯಲ್ಲಿ ತುಂಬಿದ ಕಬ್ಬಿಣದಿಂದ ತಯಾರಿಸಲ್ಪಟ್ಟಂತೆ ಕಂಡು ಬರುತ್ತಿರುವ ಸರಕು ಲಾರಿಯಿಂದ ರಸ್ತೆಯ ಎರಡೂ ಬದಿಗಳಲ್ಲಿ ಹೊರಗೆ ಚಾಚಿಕೊಂಡಿದ್ದು ರಸ್ತೆಯನ್ನು ಆವರಿಸಿಕೊಂಡಿದೆ.
ಜಿಲ್ಲೆಯಲ್ಲಿ ಚತುಷ್ಪತ ರಸ್ತೆ ಕಾಮಗಾರಿ ಇನ್ನೂ ಸಂಪೂರ್ಣ ಮುಕ್ತಾಯ ಆಗದ ಕಾರಣ ಬಹಳಷ್ಟು ಕಡೆಗಳಲ್ಲಿ ಚಿಕ್ಕದಾದ ಹೆದ್ದಾರಿ ಇದೆ ಅಂತಹ ಸ್ಥಳದಲ್ಲಿ ಈ ವಾಹನಗಳು ಅಪಾಯಕಾರಿ ಆಗುವಲ್ಲಿ ಸಂಶಯವಿಲ್ಲ, ರಾತ್ರಿ ಸಮಯದಲ್ಲಿ ವಾಹನದಲ್ಲಿ ಹೇರಲ್ಪಟ್ಟ ಸರಕು ಗೋಚರಿಸಲು ಸಹ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ ಆದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ವಾಹನ ಸಂಚಾರ ನಡೆಯುತ್ತಿದೆ ಎಂದು ಹಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾರಿ ಚಾಲಕನಿಗೆ ಹಿಂಬದಿಯಿಂದ ಬರುವ ವಾಹನಗಳು ಗೋಚರವಾಗದಂತೆ ಸರಕು ಹೇರಲಾಗಿದೆ ಇನ್ನೂ ರಾಷ್ಟ್ರೀಯ ಹೆದ್ದಾರಿ 63 ಹುಬ್ಬಳ್ಳಿ ರಸ್ತೆಯಲ್ಲಿ ಈ ವಾಹನಗಳು ಸಾಗಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಅಭಿಪ್ರಾಯಗಳು ಇತರ ವಾಹನಗಳ ಚಾಲಕರಿಂದ ಕೇಳಿ ಬಂದಿವೆ.
ಕೆಲವು ವರ್ಷಗಳ ಹಿಂದೆ ಕುಮಟಾ ಬಸ್ ಸ್ಟಾಂಡ್ ಸಮೀಪ ಇದೇ ರೀತಿ ಲಾರಿಯಿಂದ ಅಪಘಾತ ಸಂಭವಿಸಿ ಗೋಕರ್ಣ ಬಸ್ಸಿನಲ್ಲಿದ್ದ ಹಲವರ ಸಾವು ನೋವಿಗೆ ಕಾರಣವಾಗಿದ್ದನ್ನು ಸಹ ಈ ಲಾರಿಗಳ ಸಂಚಾರ ಕಂಡವರು ನೆನಪಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!