ರೊಹಿಂಗ್ಯ ಪುನರ್ವಸತಿ- ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೊರಬಿತ್ತು ಗೃಹ ಸಚಿವಾಲಯದ ಸ್ಪಷ್ಟೀಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರೋಹಿಂಗ್ಯ ನಿರಾಶ್ರಿತರಿಗೆ ದೆಹಲಿಯ ಭಕರ್ವಾಲಾ ಪ್ರಾಂತ್ಯದಲ್ಲಿ ವಸತಿ ಸಮುಚ್ಛಯವನ್ನು ನೀಡುವ ನಿರ್ಧಾರವನ್ನು ಗೃಹ ಸಚಿವಾಲಯದ ಉನ್ನತಮಟ್ಟದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾಡಿದ್ದ ಟ್ವೀಟ್ ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಗಮನಿಸಿಯೋ ಎಂಬಂತೆ ಬುಧವಾರ ಮಧ್ಯಾಹ್ನದ ವೇಳೆಗೆ ಕೇಂದ್ರ ಗೃಹ ಸಚಿವಾಲಯವು ಟ್ವೀಟುಗಳ ಮೂಲಕ ಸ್ಪಷ್ಟೀಕರಣ ನೀಡಿದೆ.

ಗೃಹ ಸಚಿವಾಲಯ ನೀಡಿರೋ ಸ್ಪಷ್ಟನೆಯೇನು?
“ರೋಹಿಂಗ್ಯಾ ಅಕ್ರಮ ವಲಸಿಗರ ಕುರಿತು ಕೆಲವು ಮಾಧ್ಯಮಗಳಲ್ಲಿ ಸುದ್ದಿ ವರದಿಗಳಿಗೆ ಸಂಬಂಧಿಸಿದಂತೆ, ಹೊಸದಿಲ್ಲಿಯ ಬಕ್ಕರ್‌ವಾಲಾದಲ್ಲಿ ರೋಹಿಂಗ್ಯಾ ಅಕ್ರಮ ವಲಸಿಗರಿಗೆ EWS ಫ್ಲಾಟ್‌ಗಳನ್ನು ಒದಗಿಸಲು ಗೃಹ ಸಚಿವಾಲಯ (MHA) ಯಾವುದೇ ನಿರ್ದೇಶನಗಳನ್ನು ನೀಡಿಲ್ಲ” ಎಂದು ಟ್ವೀಟ್‌ ನಲ್ಲಿ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
“ರೋಹಿಂಗ್ಯಾಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ದೆಹಲಿ ಸರ್ಕಾರ ಮುಂದಾಗಿದೆ. ರೊಹಿಂಗ್ಯಾ ಅಕ್ರಮ ವಲಸಿಗರು ಪ್ರಸ್ತುತ ಸ್ಥಳದಲ್ಲಿ ಮುಂದುವರಿಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಗೃಹಸಚಿವಾಲಯವು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಏಕೆಂದರೆ ಗೃಹ ಸಚಿವಾಲಯವು ವಿದೇಶಾಂಗ ಇಲಾಖೆಯ ಮೂಲಕ ಅವರನ್ನು ಸಂಬಂಧಪಟ್ಟ ದೇಶಕ್ಕೆ ಗಡೀಪಾರು ಮಾಡುವ ಕುರಿತು ಚಿಂತಿಸುತ್ತಿದೆ. ಕಾನೂನು ಪ್ರಕಾರ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವವರೆಗೆ ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಬೇಕು. ದೆಹಲಿ ಸರ್ಕಾರವು ಪ್ರಸ್ತುತ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸಿಲ್ಲ. ಕೂಡಲೇ ಘೋಷಿಸುವಂತೆ ನಿರ್ದೇಶನ ನೀಡಲಾಗಿದೆ” ಎಂದೂ ಗೃಹ ಸಚಿವಾಲಯ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ.

ಇಷ್ಟಕ್ಕೂ ಈ ಮೊದಲು ಹರ್ದೀಪ್‌ ಪುರಿ ಹೇಳಿದ್ದೇನು ?
“ಭಾರತದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಮಹತ್ವದ ನಿರ್ಧಾರದಲ್ಲಿ ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್‌ವಾಲಾ ಪ್ರದೇಶದಲ್ಲಿರುವ EWS ಫ್ಲಾಟ್‌ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳು, UNHCR ID ಗಳು ಮತ್ತು ದೆಹಲಿ ಪೋಲೀಸ್‌ ಭದ್ರತೆಯನ್ನು ನೀಡಲಾಗುವುದು. ಭಾರತದ ನಿರಾಶ್ರಿತರ ನೀತಿಯನ್ನು ಸಿಎಎ ಜತೆ ಸಮೀಕರಿಸಿ ಸುಮ್ಮನೇ ಇಲ್ಲದ ಭಯ ಹುಟ್ಟಿಸಲಾಗುತ್ತಿದೆ” ಎಂದು ಪುರಿ ಅವರು ಟ್ವೀಟ್‌ ಮಾಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಖಂಡನೆ
ಹಾಗಾದರೆ, ಸಿಎಎ ಮುಸ್ಲಿಮರ ವಿರೋಧಿ ಅಲ್ಲ ಎಂದು ತೋರಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ರೋಹಿಂಗ್ಯ ಅಕ್ರಮ ನಿವಾಸಿಗಳನ್ನು ತುಷ್ಟೀಕರಿಸುವ ಮಟ್ಟಕ್ಕೆ ಹೋಯಿತೇ? ಇದೇನಾ ಮೋದಿಯವರ ತಥಾಕಥಿತ ಮಾಸ್ಟರ್ ಸ್ಟ್ರೋಕ್ ಎಂದೆಲ್ಲ ಬಹುದೊಡ್ಡ ಆಕ್ರೋಶದ ಮಾತುಗಳು ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾದವು.
ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾಗಳನ್ನು ನಿರಾಶ್ರಿತರೆಂದು ಕರೆದಿದ್ದಕ್ಕೆ ಹಾಗೂ ಅವರಿಗೆ ವಸತಿ ಸೌಲಭ್ಯ ನೀಡುತ್ತಿರುವುದರ ಬಗ್ಗೆ ಅಪಾರ ಪ್ರಮಾಣದಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತು. ಅನೇಕರು ಈ ಕ್ರಮದ ವಿರುದ್ಧವಾಗಿ ಟ್ವೀಟ್ ಮಾಡಿದ್ದರು.

“ಒಂದೆಡೆ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು ಮತ್ತು ನಿರಾಶ್ರಿತರು ದೇಶದ ವಿವಿಧ ಭಾಗಗಳಲ್ಲಿ ಶೋಚನೀಯವಾಗಿ ಬದುಕುತ್ತಿದ್ದರೆ ದೇಶಕ್ಕೆ ಮಾರಕವಾಗಿರುವ ರೋಹಿಂಗ್ಯಾಗಳಿಗೆ ದೆಹಲಿಯಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಫ್ಲಾಟ್ಗಳನ್ನು ಒದಗಿಸಲಾಗುತ್ತಿದೆ” ಎಂದು ವ್ಯಂಗ್ಯವಾಡಿದ್ದರು.

“ರೋಹಿಂಗ್ಯಾ ಮುಸ್ಲಿಮರು ಸಿಎಎ ಅಡಿಯಲ್ಲಿ ನಿರಾಶ್ರಿತರಲ್ಲ! ಬದಲಾಗಿ ಅಕ್ರಮ ನುಸುಳುಕೋರರು, ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶವೂ ಅವರನ್ನು ಸ್ಪಷ್ಟವಾಗಿ ಸ್ವಾಗತಿಸುವುದಿಲ್ಲ! ನಾವು ನಮ್ಮ ಎಲ್ಲಾ ತತ್ವಗಳಿಗೆ ವಿದಾಯ ಹೇಳಿದ್ದೇವೆಯೇ? ನಾವು ನಮ್ಮ ಅಂತ್ಯಕ್ರಿಯೆಯ ಚಿತಾಗಾರವನ್ನು ಬೆಳಗಿಸಲಿದ್ದೇವೆಯೇ” ಎಂಬುದಾಗಿ ವ್ಯಕ್ತಿಯೊಬ್ಬರು ಆಕ್ರೋಶ ಹೊರಹಾಕಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!