ಕಾರು ಸುಟ್ಟ ರೌಡಿ ಶೀಟರ್ ಕಾಲಿಗೆ ಪೊಲೀಸರ ಗುಂಡೇಟು

ಹೊಸದಿಗಂತ ವರದಿ ಶಿವಮೊಗ್ಗ:

ಕೊಲೆ ಯತ್ನದ ಕೇಸ್ ವಾಪಾಸ್ ಪಡೆಯುವಂತೆ ಬೆದರಿಸಿ, ಬಳಿಕ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ್ದ ರೌಡಿ ಶೀಟರ್‌ಗೆ ಪೊಲೀಸರು ಸೋಮವಾರ ಬೆಳಿಗ್ಗೆ ಗುಂಡೇಟಿನ ರುಚಿ ತೋರಿಸಿದ್ದಾರೆ.
ರೌಡಿ ಶೀಟರ್ ಪ್ರವೀಣ್ ಅಲಿಯಾಸ್ ಮೋಟು ಪ್ರವೀಣ ಗುಂಡೇಟು ತಿಂದವ. ಈತನ ಬಂಧನಕ್ಕೆ ಆಯನೂರು ಸಮೀಪದ ವಿಠಗೊಂಡನಕೊಪ್ಪಕ್ಕೆ ತೆರಳಿದ್ದ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಶಿವರಾಜ್ ಮೇಲೆ ಈತ ಹಲ್ಲೆ ನಡೆಸಲು ಮುಂದಾಗಿದ್ದ. ಆಗ ಪಿಎಸ್‌ಐ ರಮೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆಗಲೂ ರೌಡಿ ಶೀಟರ್ ಮಾತು ಕೇಳದೇ ಇದ್ದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ಪೊಲೀಸ್ ಶಿವರಾಜ್ ಮತ್ತು ರೌಡಿ ಶೀಟರ್ ಪ್ರವೀಣ್‌ಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಲ್ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ವನಜಾಕ್ಷಿ ಅವರ ಅಂಗಡಿಗೆ ಮೂರು ತಿಂಗಳ ಹಿಂದೆ ಬಂದಿದ್ದ ಮೋಟು ಪ್ರವೀಣ ಮತ್ತು ಆತನ ಸಂಗಡಿಗರು ಕ್ಯಾತೆ ತೆಗೆದಿದ್ದರು. ಬಳಿಕ ಅಲ್ಲಿಯೇ ಕೊಲೆ ಯತ್ನ ನಡೆಸಿದ್ದರು. ಈ ಬಗ್ಗೆ ವನಜಾಕ್ಷಮ್ಮ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರವೀಣ ಮತ್ತು ಸಂಗಡಿಗರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಈತ ಹೊರಬಂದಿದ್ದ.
ಬಳಿಕ ವನಜಾಕ್ಷಮ್ಮ ಅವರ ಮನೆ ಮುಂದೆ ಹೋಗಿ ದೂರು ವಾಪಾಸ್ ಪಡೆಯಲು ಬೆದರಿಕೆ ಹಾಕಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಬಾಸ್ ಈಸ್ ವೈಟಿಂಗ್ ಫಾರ್ ಕಿಲ್ಲಿಂಗ್ ಎಂದು ಬರೆದುಕೊಂಡಿದ್ದರು. ಡಿಸೆಂಬರ್ 17ರ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ವನಜಾಕ್ಷಮ್ಮ ಮಗನಿಗೆ ಕರೆ ಮಾಡಿ ಮನೆಯಿಂದ ಹೊರಬರಲು ಬೆದರಿಕೆ ಹಾಕಿದ್ದರು. ಆತ ಬರದೇ ಇದ್ದಾಗ ಮನೆ ಮುಂದೆ ನಿಲ್ಲಿಸಿದ್ದ ಅವರ ಮಗಳ ಕಾರನ್ನು ಪುಡಿಮಾಡಿ ಬೆಂಕಿ ಹಚ್ಚಿದ್ದರು. ಕಾರು ಸುಟ್ಟಿದ್ದರಿಂದ 12 ಲಕ್ಷ ರೂ. ನಷ್ಟವಾಗಿದೆ, ಕಾರಿನಲ್ಲಿ 30 ಸಾವಿರ ರೂ. ನಗದು ಕೂಡ ಇತ್ತು ಎಂದು ವನಜಾಕ್ಷಮ್ಮ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗೆ ಗುಂಡೇಟು ನೀಡಿದ್ದಾರೆ. ಈತನ ಮೇಲೆ 15 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಎಸ್‌ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!