ಮಾ.11ರಿಂದ ಗುಜರಾತ್‌ನಲ್ಲಿ ಆರೆಸ್ಸೆಸ್‌ ವಾರ್ಷಿಕ ಪ್ರತಿನಿಧಿ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಾ. 11 ರಿಂದ 13ರ ವರೆಗೆ ಗುಜರಾತ್‌ನ ಕರ್ಣಾವತಿಯಲ್ಲಿ ʼಅಖಿಲ ಭಾರತೀಯ ವಾರ್ಷಿಕ ಪ್ರತಿನಿಧಿ ಸಭೆʼ ಏರ್ಪಡಿಸಿದೆ.
ಈ ಕುರಿತು ಆರೆಸ್ಸೆಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಮಾಹಿತಿ ನೀಡಿದ್ದು, ಆರೆಸ್ಸೆಸ್ ಮುಂಬರುವ ವರ್ಷಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳು ಮತ್ತು ಪ್ರಮುಖ ನಿರ್ಧಾರಗಳ ಕುರಿತು ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸಭೆಯು ಅತ್ಯಂತ ಮಹತ್ವ ಪಡೆದಿದೆ ಎಂದಿದ್ದಾರೆ.
ಕಳೆದ ವರ್ಷದಲ್ಲಿ ಸಂಘದ ಕಾರ್ಯಚಟುವಟಿಕೆಗಳ ವರದಿಗಳು, ಮುಂದಿನ ವರ್ಷದಲ್ಲಿ ಸಂಘ ಶಿಕ್ಷಾ ವರ್ಗದ ಕಾರ್ಯ ವಿಸ್ತರಣೆ ಕುರಿತಾದ ಯೋಜನೆಗಳು ಹಾಗೂ ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಘಟನಾವಳಿಗಳ ಕುರಿತು ಚರ್ಚೆಗಳು ನಡೆಯಲಿವೆ. ಕೆಲವು ಸಮಸ್ಯೆಗಳ ಬಗ್ಗೆ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ ಎಂದಿದ್ದಾರೆ.
ಕಳೆದ ವರ್ಷ ಕೊರೋನಾ ಸಾಂಕ್ರಾಮಿಕ ಕಾರಣದಿಂದಾಗಿ ಸಭೆಯನ್ನು ಸಣ್ಣ ಪ್ರಮಾಣದಲ್ಲಿ ನಡೆಸಲಾಗಿತ್ತು. ಹೆಚ್ಚಿನ ಕಾರ್ಯಕರ್ತರು ತಮ್ಮ ಪ್ರಾಂತ್ಯ ಕೇಂದ್ರಗಳಿಂದ ಆನ್‌ ಲೈನ್‌ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು. ಈ ವರ್ಷದ ವಾರ್ಷಿಕ ಸಭೆಯನ್ನು ಎಲ್ಲಾ ರೀತಿಯಾದ ಕೊರೋನಾ ಪ್ರೋಟೋಕಾಲ್‌ ಗಳನ್ನು ಅನುಸರಿಸಿ ಗುಜರಾತ್‌ ನಲ್ಲಿ ಆಯೋಜಿಸಲಾಗಿದೆ. ಈ ಕಾರಣದಿಂದಾಗಿ ಸೀಮಿತ ಸಂಖ್ಯೆಯ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಲು ಅವಕಾಶವಿದೆ.
ಸಭೆಯಲ್ಲಿ ಪೂಜನೀಯ ಸರಸಂಘಚಾಲಕ್ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹ ಕೃಷ್ಣಗೋಪಾಲ್, ಮನಮೋಹನ್ ವೈದ್ಯ, ಮುಕುಂದ್, ರಾಮದತ್, ಅರುಣ್ ಕುಮಾರ್ ಮತ್ತು ಆರ್‌ಎಸ್‌ಎಸ್‌ನ ಎಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಾಂತದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಎಲ್ಲಾ ವಲಯ ಮತ್ತು ಪ್ರಾಂತ ಮಟ್ಟದ ಸಂಘಚಾಲಕರು, ಕಾರ್ಯವಾಹರು, ಪ್ರಚಾರಕರ ಜೊತೆಗೆ ಅಖಿಲ ಭಾರತೀಯ ಸಂಘಟನೆಯ ಮಂತ್ರಿಗಳು ಮತ್ತು ವಿವಿಧ ಸಂಘ ಪ್ರೇರಿತ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!