May 27, 2026
Wednesday, May 27, 2026
spot_img

5,000 ಕೋಟಿ ರೂ ಅನುದಾನ… ಅಭಿವೃದ್ಧಿ ಮಾತ್ರ ‘ಜೀರೋ’? ಕಲ್ಯಾಣ ಕರ್ನಾಟಕಕ್ಕೆ ಮತ್ತೆ ಅನ್ಯಾಯ ಆರೋಪ

ಹೊಸದಿಗಂತ ವರದಿ ಬೀದರ್:

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಅನುಕೂಲವಾಗಲೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟು 5 ಸಾವಿರ ಕೋಟಿ ರೂಪಾಯಿ ಅನುದಾನ ಪ್ರತಿ ವರ್ಷ ಬರುತ್ತದೆ ಆದರೂ ಕೂಡ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಈ ಪ್ರದೇಶ ಇಂದಿಗೂ ಅತಿ ಹಿಂದುಳಿದ ಪ್ರದೇಶಗಳಲ್ಲಿ ಗುರುತಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಭ್ರಷ್ಟಾಚಾರ ಹಾಗೂ ಆಯ್ಕೆಯಾದ ಶಾಸಕರ ಅಭಿವೃದ್ಧಿ ಕುರಿತು ನಿಷ್ಕಾಳಜಿ ಧೋರಣೆಯಾಗಿದೆ.

ಇತ್ತೀಚೆಗೆ ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಭೆ ಜೆವರ್ಗಿ ಶಾಸಕರಾದ ಅಜಯ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಭಿವೃದ್ಧಿಯ ರೂಪುರೇಷೆ ಇಲ್ಲದೆ ಸಭೆ:

ಸಭೆಯಲ್ಲಿ ಚರ್ಚಿಸಿದ ವಿಷಯಗಳು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2026-27ನೇ ಆರ್ಥಿಕ ಸಾಲಿಗೆ ರಾಜ್ಯ ಸರ್ಕಾರದಿಂದ‌ ಹಂಚಿಕೆಯಾದ 5,000 ಕೋಟಿ ರೂ. ಮೊತ್ತದ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಸೋಮವಾರ ನಡೆದ ಮಂಡಳಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಮೈಕ್ರೋ ಮತ್ತು ಮ್ಯಾಕ್ರೊ ನಿಧಿಗೆ 2,900 ಕೋಟಿ ರೂ.ಕಾಯ್ದಿರಿಸಿದ್ದು, ಇದರಲ್ಲಿ ಮೈಕ್ರೋಗೆ ಶೇ.70 ಮತ್ತು ಮ್ಯಾಕ್ರೋಗೆ ಶೇ.30 ಅನುದಾನ ಬಳಸಿಕೊಳ್ಳಲು ನಿರ್ಧರಿಸಿದೆ.

ಅಲ್ಲದೆ ಬಜೆಟ್ ನಲ್ಲಿ ಘೋಷಿಸುವ ಯೋಜನೆಗಳಿಗೆ 1500 ಕೋಟಿ ರೂ., ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಕ್ಕೆ 100 ಕೋಟಿ ರೂ., ಪ್ರಾದೇಶಿಕ ನಿಧಿ ಒಳಗೊಂಡಂತೆ ಸಿ‌.ಎಂ, ಮಂಡಳಿ ಅಧ್ಯಕ್ಷರು, ಸರ್ಕಾರದ‌ ವಿವೇಚನಾ ನಿಧಿಗೆ 450 ಕೋಟಿ ರೂ. ಹಾಗೂ ಆಡಳಿತಾತ್ಮಕ ವೆಚ್ಚಕ್ಕೆ 50 ಕೋಟಿ ರೂ. ಅನುದಾನ ಬಳಕೆಗೆ ಒಮ್ಮತದ ನಿರ್ಣಯ ಕೈಗೊಂಡಿದೆ. ಮೈಕ್ರೊ ಯೋಜನೆಯಡಿ ಸಾಂಸ್ಥಿಕ ವಲಯ ಅಭಿವೃದ್ಧಿಗೆ ಮೀಸಲಾದ ಅನುದಾನದಲ್ಲಿ ಅಕ್ಷರ‌ ಅವಿಷ್ಕಾರಕ್ಕೆ 25% ಇತರೆ ಸಾಂಸ್ಥಿಕ ವಲಯಕ್ಕೆ 15% ಹಾಗೂ ಮೂಲಭೂತ ಸೌಲಭ್ಯ ಕಾರ್ಯಕ್ಕೆ ಶೇ.60ರಷ್ಟು ಅನುದಾನ ನಿಗದಿ ಮಾಡಲಾಗಿದೆ.

ಆರೋಗ್ಯ-ಶಿಕ್ಷಣಕ್ಕೆ ವಿಶೇಷ ಅನುದಾನ

ಅದೇ‌ ರೀತಿ ಇದೇ‌ ಮೊದಲ ಬಾರಿಗೆ ಆಯವ್ಯಯದಲ್ಲಿ ಘೋಷಿಸಿದಂತೆ ಮ್ಯಾಕ್ರೋ ಯೋಜನೆ ಅನುದಾ‌ನದಡಿ‌ ಶೇ.40ರಷ್ಟು ಅನುದಾನ ಆರೋಗ್ಯ, ಶಿಕ್ಷಣ, ಹಾಗೂ ಅಪೌಷ್ಟಿಕತೆ ನಿವಾರಣೆಗೆ ಮೀಸಲಿರಿಸಲು ಸಭೆ ಒಪ್ಪಿಗೆ ಸೂಚಿಸಿದೆ. ಬೀದರ್‌-ಬೆಂಗಳೂರು ಆರ್ಥಿಕ ಕಾರಿಡಾರ್ ಆಗಿ ಪರಿವರ್ತನೆಗೆ 4 ಪಥದ 400 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು 8,200 ಕೋಟಿ ರೂ. ಅನುದಾನ ಅವಶ್ಯಕತೆ ಇದ್ದು, ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಭರಿಸಿ ಅಭಿವೃದ್ಧಿಪಡಿಸಲು ಮತ್ತು ರಾಜ್ಯ ಸರ್ಕಾರದ ಮಾದರಿಯಲ್ಲಿ ಮಂಡಳಿಗೆ ಕೇಂದ್ರ ಸರಕಾರ ಸಹ ಮ್ಯಾಚಿಂಗ್ ಗ್ರ್ಯಾಂಟ್ ಅನುದಾನ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿ ಸಭೆ ಠರಾವು ಪಾಸು ಮಾಡಿದೆ.

ಇನ್ನು ಪ್ರಸಕ್ತ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದ ಯೋಜನೆಗೆ ಮಂಡಳಿ ಪಾಲಿನ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಇದಲ್ಲದೆ ಈ ವರ್ಷ ಸಹ ಅಕ್ಷರ‌ ಆವಿಷ್ಕಾರ ಯೋಜನೆಯಡಿ ಪ್ರತಿ ಪ್ರತಿ ತಾಲೂಕಿಗೆ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ತಲಾ‌ 25 ಲಕ್ಷ ರೂ. ವಿಶೇಷ ಅನುದಾನ ನೀಡಲು ಸಭೆ ಸಮ್ಮತಿಸಿದೆ.

ನೆನಪಿಗೆ ಬಾರದ ಬೀದರ್ ಜಿಲ್ಲೆಯ ಅಭಿವೃದ್ಧಿ ಕಾಮಗಾರಿ:

ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸುವ ವಿಚಾರ ಕಳೆದ ಎರಡು ದಶಕಗಳಿಂದ ನೆನಪಿಗೆ ಬಾರಲಿಲ್ಲ ಎಂದೆನಿಸುತ್ತದೆ. 4 ಬಾರಿ ಶಾಸಕರಾಗಿ ಆಯ್ಕೆಯಾದರೂ ಒಂದೇ ಒಂದು ಬಾರಿ ಪ್ರದೇಶಾಭಿವೃದ್ಧಿ ಮಂಡಳಿಯ ಸಭೆಯಲ್ಲಿ ಪ್ರಸ್ತಾಪಿಸದೇ ಅವರ ಬೀದರ್ ಜಿಲ್ಲೆಯ ರೈತರ ಹಾಗೂ ಜಿಲ್ಲೆಯ ಅಭಿವೃದ್ಧಿ ಕುರಿತು ನಿರ್ಲಕ್ಷ್ಯ ಧೋರಣೆ ಎತ್ತಿ ತೋರಿಸುತ್ತದೆ.

ಕಳೆದ ಆರು ದಶಕಗಳಿಂದ ರಾಜ್ಯದ ಹಕ್ಕಿನ 24 ಟಿಎಂಸಿ ನೀರು ತೆಲಂಗಾಣದ ಪಾಲಾಗುತ್ತಿದೆ, ಈ ನೀರಿನ ಸದ್ಬಳಕೆ ಮಾಡಲು ಗೋದಾವರಿ ಜಲಾನಯನ ಪ್ರದೇಶದಲ್ಲಿ ಚೆಕ್ ಡ್ಯಾಮ್ ಗಳ ನಿರ್ಮಿಸುವ ಕಾಮಗಾರಿ ಕುರಿತು ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆ ಆಗಿ ಸುಮಾರು 3 ದಶಕ ಕಳೆದರೂ ಈ ಕಾಮಗಾರಿಯ ಕುರಿತು ಪ್ರಸ್ತಾಪ ಮಾಡಲಾಗಿಲ್ಲ ಹಾಗೂ ಬಿಡಿ ಕಾಸು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ.

ಇದನ್ನೂ ಓದಿ:

ಗೋದಾವರಿ ಜಲಾನಯನ ಪ್ರದೇಶದಲ್ಲಿ ಚೆಕ್ ಡ್ಯಾಮ್ ಗಳ ನಿರ್ಮಿಸಿದರೆ ಸುಮಾರು 10 ಲಕ್ಷ ಎಕ್ಕರೆ ಜಮೀನಿಗೆ ನೀರುಣಿಸಿಬಹುದು. ಅಲ್ಲದೇ 10-15 ಲಕ್ಷ ಕೃಷಿ ಆಧಾರಿತ ಉದ್ಯೋಗ ಸೃಷ್ಟಿ ಆಗಬಹುದು , ಇದರಿಂದ ಕೃಷಿಗೆ ಹೆಚ್ಚಿನ ಅನುಕೂಲ ಆಗಬಹುದೆಂದು ಈ ಹಿಂದೆ ನಡೆದ ಸರ್ವೆಯಲ್ಲಿ ತಿಳಿಸಲಾಗಿತ್ತು. ಅಲ್ಲದೇ ₹500 ಕೋಟಿ ಅನುದಾನದಲ್ಲಿ ಈ ಯೋಜನೆ ಈ ಮಹತ್ವದ ಯೋಜನೆ ಪೂರ್ಣಗೊಳಿಸಬಹುದೆಂದು ಹಿಂದಿನ ಸರ್ವೆಯಲ್ಲಿ ತಿಳಿಸಲಾಗಿತ್ತು. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಗಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈ ಕುರಿತು ಗಮನ ಹರಿಸದೆ ರೈತರ ಜ್ವಲಂತ ಸಮಸ್ಯೆಯ ಬಗ್ಗೆ ಸತತ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ.

ಸಚಿವ ಈಶ್ವರ ಖಂಡ್ರೆ ಅವರ ತಂದೆಯಾದ ದಿವಂಗತ ಭೀಮಣ್ಣ ಖಂಡ್ರೆ ೪ ಬಾರಿ ಶಾಸಕರಾಗಿ, ೩ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಒಂದು ಬಾರಿ ಸಚಿವರಾಗಿ ಹೋದರು ಅವರ ಕನಸಾದ ಗೋದಾವರಿ ಜಲಾನಯನ ಪ್ರದೇಶದ ನಿರಾವರಿ ಯೋಜನೆ ಅವರ ಜೀವಮಾನದಲ್ಲಿ ಪೂರ್ಣಗೊಳಿಸಲು ಆಗಲಿಲ್ಲ. ಸಚಿವ ಈಶ್ವರ ಖಂಡ್ರೆ ಅವರ ತಂದೆಯ ದಶಕಗಳ ಕನಸು ನನಸು ಮಾಡುವ ಇಚ್ಛೆ ತೋರಿಸಿದೆ ರೈತರ ಸ್ನೇಹಿ ‘ಲೋಕನಾಯಕ’ ಭೀಮಣ್ಣ ಖಂಡ್ರೆ ಅವರಿಗೆ ತಿರಸ್ಕಾರ ಮಾಡಿದಂತಾಗಿದೆ.

24 ಟಿಎಂಸಿ ನೀರು ಸದ್ಬಳಕೆಗೆ ಕಾಳಜಿ ವಹಿಸಿ:

ವಿ.ಕೆ.ದೇಶಪಾಂಡೆ ಅನಗತ್ಯ ಕಾಮಗಾರಿಗಳಿಗೆ ಹಣ ಖರ್ಚು ಮಾಡುವ ಬದಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಬೀದರ್ ಜಿಲ್ಲೆಯ ಗೋದಾವರಿ ಜಲಾನಯನ ಪ್ರದೇಶದ ಚೆಕ್ ಡ್ಯಾಮ್ ಯೋಜನೆಗೆ ವಿಶೇಷವಾಗಿ ಗಮನ ಹರಿಸಿ ಇದೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಪರಿಗಣಿಸಿ ರಾಜ್ಯ ಸರ್ಕಾರದಿಂದ ಈ ಕಾಮಗಾರಿಯ ಆರಂಭಕ್ಕೆ ಶೀಘ್ರ ಕ್ರಮ ವಹಿಸಬೇಕಿದೆ.

ಜಿಲ್ಲೆಯ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಬದಲು ಅಡಿಪಾಯ ಹಾಕಿ ಕಾಮಗಾರಿ ಪೂರ್ಣ ಗೊಳಿಸಿದರೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರ್ಗಿ ಎರಡೂ ಜಿಲ್ಲೆಗಳ ಕೃಷಿ ಭೂಮಿಗೆ ಸಹಕಾರಿ ಆಗಲಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶಾಸಕ ಅಜಯ್ ಸಿಂಗ್ ಹಾಗೂ ಬೀದರ್ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಗೋದಾವರಿ ಬೇಸಿನ್ ಜಲಾನಯನ ಚೆಕ್ ಡ್ಯಾಮ್ ಕಾಮಗಾರಿಗೆ ಅನುದಾನ ಬಿಡುಗಡೆಗೆ ಸಾಮಾಜಿಕ ಕಾರ್ಯಕರ್ತ ರೈತ ಹಿತರಕ್ಷಣಾ ಸಮಿತಿಯ ವಿ.ಕೆ.ದೇಶಪಾಂಡೆ ಆಗ್ರಹಿಸಿದ್ದಾರೆ .

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !