ವೃದ್ಧ ದಂಪತಿಗೆ ವೀಲ್‌ಚೇರ್ ನೀಡದೆ ಅಸಭ್ಯ ವರ್ತನೆ: ಇಂಡಿಗೋ ಏರ್‌ಲೈನ್ಸ್‌ ಗೆ 1 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೃದ್ಧ ದಂಪತಿಗೆ ವೀಲ್‌ಚೇರ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸದ ಇಂಡಿಗೋ ಏರ್‌ಲೈನ್ಸ್‌ಗೆ 1 ಲಕ್ಷ ಪರಿಹಾರ ನೀಡುವಂತೆ ಚಂಡೀಗಢದ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ.

70 ವರ್ಷದ ಸುನಿಲ್ ಜಾಂಡ್ ಮತ್ತು ಅವರ 67 ವರ್ಷದ ಪತ್ನಿ ವೀಣಾ ಕುಮಾರಿ ದಂಪತಿಯ ದೂರಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.
2023ರ ಅಕ್ಟೋಬರ್ 11 ರಂದು ಚಂಡೀಗಢದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ಸಂಜೆ 4.45ಕ್ಕೆ ಚಂಡೀಗಢದಿಂದ ಹೊರಟು ರಾತ್ರಿ 7.35ಕ್ಕೆ ಬೆಂಗಳೂರಿಗೆ ತಲುಪುವ ವಿಮಾನ ಇದಾಗಿತ್ತು. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ 67 ವರ್ಷದ ವೀಣಾ ಕುಮಾರಿ ಮತ್ತು 70 ವರ್ಷದ ಸುನಿಲ್ ಜಾಂಡ್ ವೀಲ್‌ಚೇರ್ ಸೌಲಭ್ಯಕ್ಕಾಗಿ ಮನವಿ ಮಾಡಿದ್ದರು.

ಆದರೆ, ಅವರಿಗೆ ವೀಲ್‌ಚೇರ್ ಸೌಲಭ್ಯ ಒದಗಿಸಲಿಲ್ಲ. ಜೊತೆಗೆ ಸಿಬ್ಬಂದಿಯಿಂದ ಅಸಭ್ಯ ವರ್ತನೆ ಎದುರಿಸಬೇಕಾಯಿತು. ದೈಹಿಕವಾಗಿ ಓಡಾಡಲು ಕಷ್ಟವಾಗುತ್ತಿದೆ ಎಂದು ತಿಳಿಸಿದರೂ, ಸಾಮಾನ್ಯ ಪ್ರಯಾಣಿಕರಂತೆ ಚೆಕ್-ಇನ್ ಮಾಡಬೇಕೆಂದು ಒತ್ತಾಯಿಸಲಾಯಿತು. ಇಂಡಿಗೋ ಕೌಂಟರ್‌ಗೆ ಹೋಗುವ ಬದಲು 40 ಅಡಿಗಳಷ್ಟು ದೂರ ಇಳಿದು ನಡಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಮಾನ ಹೊರಡಲು 1 ಗಂಟೆಗೂ ಹೆಚ್ಚು ಸಮಯ ಇದ್ದ ಕಾರಣ, ಲಾಂಜ್ ಸೌಲಭ್ಯ ಕೋರಿದ್ದ ದಂಪತಿಯನ್ನು ಗ್ರೌಂಡ್‌ ಫ್ಲೋರ್ ಬಿಟ್ಟು ಮೊದಲ ಮಹಡಿಯ ಲಾಂಜ್‌ಗೆ ಕರೆದೊಯ್ಯಲಾಯಿತು. ಆದರೆ, ವಿಮಾನ ಹೊರಡುವ ಸಮಯವಾದರೂ ಲಾಂಜ್‌ನಿಂದ ಗೇಟ್‌ಗೆ ಬರಲು ಯಾರೂ ಸಹಾಯ ಮಾಡಲಿಲ್ಲ. ಬಳಿಕ ವಿಮಾನ ಹೊರಡುವ ಗೇಟ್ ಸಹ ಬದಲಾಯಿತು. ಕೊನೆಯ ಗಳಿಗೆಯಲ್ಲಿ ವಿಮಾನ ಹೊರಡುವ ಮುನ್ನ ಗೇಟ್‌ಗೆ ಬಂದ ದಂಪತಿಯೊಂದಿಗೆ ವಿಮಾನ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದರು. ಸಾಕಷ್ಟು ವಾಗ್ವಾದದ ನಂತರ ಅವರಿಗೆ ವೀಲ್‌ಚೇರ್ ಸೌಲಭ್ಯ ಒದಗಿಸಲಾಯಿತು.

ಈ ವೃದ್ಧ ದಂಪತಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಆರಂಭವಾದ ದೈಹಿಕ ಕಿರುಕುಳ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಮುಂದುವರೆಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬ್ಯಾಗ್‌ಗಳು ಮತ್ತು ವೀಲ್‌ಚೇರ್‌ನೊಂದಿಗೆ ವಿಮಾನ ನಿಲ್ದಾಣದ ಮುಖ್ಯ ದ್ವಾರದ ಹೊರಗೆ ಬಿಟ್ಟು ಇಂಡಿಗೋ ಸಿಬ್ಬಂದಿ ಹಿಂತಿರುಗಿದರು. ಟ್ಯಾಕ್ಸಿ ನಿಲ್ದಾಣಕ್ಕೆ ವೀಲ್‌ಚೇರ್ ತೆಗೆದುಕೊಂಡು ಹೋಗಲು ಸಹಾಯ ಕೇಳಿದಾಗಲೂ ಅಸಭ್ಯವಾಗಿ ವರ್ತಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ದೂರು ನೀಡಿದಾಗ ಕೇವಲ 2,000 ಪರಿಹಾರ ನೀಡಿದ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಲಿಲ್ಲ. ಹೀಗಾಗಿ ವೃದ್ಧ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದರು.

ಇನ್ನು ಇಂಡಿಗೋ ವಿಮಾನಯಾನ ಸಂಸ್ಥೆಗೆ ದೂರಿನ ಬಗ್ಗೆ ವಿವರಣೆ ನೀಡಲು ಎರಡು ಬಾರಿ ನೋಟಿಸ್ ನೀಡಿದರೂ ಇಂಡಿಗೋ ಏರ್‌ಲೈನ್ಸ್‌ ಪ್ರತಿಕ್ರಿಯಿಸಲಿಲ್ಲ. ಹೀಗಾಗಿ ವೃದ್ಧ ದಂಪತಿಗೆ 1 ಲಕ್ಷ ಪರಿಹಾರ ನೀಡುವಂತೆ ಇಂಡಿಗೋ ಸಂಸ್ಥೆಗೆ ನ್ಯಾಯಾಲಯ ಆದೇಶಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!