ಪ್ರೇಯಸಿಯನ್ನು 111 ಬಾರಿ ಇರಿದು ಕೊಂದ ಆರೋಪಿಯ ಆ ಒಂದು ನಿರ್ಧಾರಕ್ಕೆ ಜೈಲಿನಿಂದ ಬಿಡುಗಡೆ ಮಾಡಿದ ರಷ್ಯಾ ಅಧ್ಯಕ್ಷ ಪುಟಿನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರೇಯಸಿ ಮೇಲೆ ಅತ್ಯಾಚಾರ ಗೈದು, 111 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ ಆರೋಪಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್, ಕ್ಷಮಾಧಾನ ನೀಡಿದ್ದು, ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.

ಒಮ್ಮೆಗೆ ಈ ಸುದ್ದಿ ಕೇಳಿ ಎಲ್ಲರಿಗೂ ಅಚ್ಚರಿಯಾಗಿದ್ದು, ಪುಟಿನ್ ​ ಇಂಥಾ ಆರೋಪಿನಾ ಯಾರಾದರೂ ಬಿಡುಗಡೆ ಮಾಡಿದ್ರಾ ಎಂದು ಕೇಳಿದ್ದಾರೆ. ಆದ್ರೆ ಇದಕ್ಕೆ ಕಾರಣ ಆರೋಪಿಯ ಒಂದೇ ಒಂದು ತೀರ್ಮಾನ.

ಹೌದು, ಆರೋಪಿ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್​ ನಡುವಿನ ಯುದ್ಧದಲ್ಲಿ ಉಕ್ರೇನ್​ ವಿರುದ್ಧ ಹೋರಾಡಲು ರೆಡಿ ಎಂದಿದ್ದಕ್ಕೆ ಜೈಲಿನಿಂದ ಆತನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.ಆರೋಪಿಗೆ 17 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಕೇವಲ ಒಂದು ವರ್ಷ ಮಾತ್ರ ಪೂರೈಸಿದ್ದ. ಜೈಲಿನಿಂದ ಹೊರಬಂದು ರಣರಂಗಕ್ಕೆ ಇಳಿದಿದ್ದಾನೆ.

ಆರೋಪಿ ಹೆಸರು ವ್ಲಾಡಿಸ್ಲಾವ್​ ಕಾನ್ಯಸ್. ಲವ್​ ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ತನ್ನ ಗರ್ಲ್​ಫ್ರೆಂಡ್​ ವೆರಾ ಪೆಖ್ತೆಲೆವಾಳನ್ನು ರೇಪ್​ ಮಾಡಿ, ಮೂರೂವರೆ ಗಂಟೆ ಕಿರುಕುಳ ನೀಡಿ, 111 ಬಾರಿ ಇರಿದು ಕೊಲೆ ಮಾಡಿದ್ದ. ಚಾಕುವಿನಿಂದ ಇರಿದಿದ್ದಲ್ಲದೆ, ಕಬ್ಬಿಣದ ತಂತಿಯಿಂದ ಉಸಿರುಗಟ್ಟಿಸಿ ಹತ್ಯೆಗೈದಿದ್ದ. ಪೆಖ್ತೆಲೆವಾಳ ನರಳಾಟ ಕೇಳಿ, ನೆರೆಮನೆಯವರು 7 ಬಾರಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಆತನ ಬಂಧನವಾಗಿತ್ತು.

ಇದೀಗ ಆರೋಪಿ ವ್ಲಾಡಿಸ್ಲಾವ್​ ಕಾನ್ಯಸ್, ಮಿಲಿಟರಿ ಸಮವಸ್ತ್ರದಲ್ಲಿ ಬಂದೂಕು ಹಿಡಿದಿರುವ ಫೋಟೋವನ್ನು ಪೆಖ್ತೆಲೆವಾಳ ತಾಯಿ ಒಕ್ಸನಾ ನೋಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯು ಹೊರಗಡೆ ರಾಜಾರೋಷವಾಗಿ ತಿರುಗಾಡಿಕೊಂಡು ಇರುವುದನ್ನು ನೋಡಿದ ಮೃತಳ ತಾಯಿ, ಇದು ನನಗೆ ಒಂದು ದೊಡ್ಡ ಹೊಡೆತ, ನನ್ನ ಮಗು ಸಮಾಧಿಯಲ್ಲಿ ಕೊಳೆಯುತ್ತಿದ್ದಾಳೆ ಮತ್ತು ನನ್ನಿಂದ ಎಲ್ಲವನ್ನು ಕಸಿದುಕೊಳ್ಳಲಾಗಿದ್ದು, ನನ್ನ ಜೀವನದಲ್ಲಿ ಯಾವುದೇ ಭರವಸೆಗಳಿಲ್ಲದೆ ವಂಚಿತಳಾಗಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ದುಃಖಿಸಿದ್ದಾರೆ.

ಆರೋಪಿಯನ್ನು ಉಕ್ರೇನ್ ಗಡಿಯಲ್ಲಿರುವ ದಕ್ಷಿಣ ರಷ್ಯಾದ ರೋಸ್ಟೊವ್‌ಗೆ ವರ್ಗಾವಣೆ ಮಾಡಿರುವುದನ್ನು ಜೈಲು ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ರಷ್ಯಾದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅಲಿಯೋನಾ ಪೊಪೊವಾ ಅವರು ತಿಳಿಸಿದ್ದಾರೆ.

ನ. 3 ರಂದು ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಬಿಡುಗಡೆ ಮಾಡಿರುವ ಪತ್ರವನ್ನು ಪೊಪೊವಾ ಹಂಚಿಕೊಂಡಿದ್ದು, ಅದರಲ್ಲಿ ಆರೋಪಿ ಕಾನ್ಯುಸ್ ಅವರನ್ನು ಕ್ಷಮಿಸಲಾಗಿದೆ ಎಂದು ತಿಳಿಸಲಾಗಿದೆ ಮತ್ತು ಅವರ ಅಪರಾಧವನ್ನು ಏಪ್ರಿಲ್ 27ರಂದು ಅಧ್ಯಕ್ಷರ ತೀರ್ಪಿನಿಂದ ರದ್ದುಪಡಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆಯಿಂದ ಮೃತಳ ತಾಯಿ ತನ್ನ ಮಗಳ ಕೊಲೆಗಾರನನ್ನು ಕ್ಷಮಿಸಿದ್ದಕ್ಕಾಗಿ ಪುಟಿನ್​ರನ್ನು ದೂಷಿಸಿದ್ದಾರೆ. ಅಲ್ಲದೆ, ತನ್ನ ಸುರಕ್ಷತೆಯ ಬಗ್ಗೆಯೂ ಚಿಂತಿಸುತ್ತಿದ್ದಾರೆ. ಕ್ರೂರ ಕೊಲೆಗಾರನಿಗೆ ಆಯುಧವನ್ನು ಹೇಗೆ ನೀಡಬಹುದು? ರಷ್ಯಾವನ್ನು ರಕ್ಷಿಸಲು ಅವನನ್ನೇಕೆ ಮುಂದೆ ಬಿಡಲಾಗಿದೆ. ಅವನು ಕಲ್ಮಶ ಮನಸ್ಸಿನವನು ಮತ್ತು ಅವನು ಮನುಷ್ಯನೇ ಅಲ್ಲ ಎಂದಿದ್ದಾರೆ. ಪ್ರತೀಕಾರ ತೀರಿಸಿಕೊಳ್ಳಲು ಯಾವುದೇ ಕ್ಷಣದಲ್ಲಿ ಆರೋಪಿ ನಮ್ಮಲ್ಲಿ ಯಾರಾದರೊಬ್ಬರನ್ನು ಕೊಲೆ ಮಾಡಬಹುದು ಎಂದು ಆತಂಕ ಹೊರಹಾಕಿದ್ದಾರೆ.

ಕ್ರೆಮ್ಲಿನ್ (ರಷ್ಯಾ ಅಧ್ಯಕ್ಷರ ಕಚೇರಿ) ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!