ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊನೆಗೂ ಆ ಕ್ಷಣ ಸಾಕಾರವಾಗಿದೆ.
ಅಲ್ಲಕ ಕೇದಾರೇಶ್ವರ ರಾವ್ ಬಿ.ಎಡ್ ಅವರು ಈಗ ಶಿಕ್ಷಕರಾಗಿದ್ದಾರೆ. ಏನಪ್ಪಾ ವಿಶೇಷಾ ಅಂದ್ರಾ? ಕೇಳಲು ಇದು ಒಂಥರಾ ಸಿನೆಮಾ ಕಥೆಯಂತಿದೆ. ತನ್ನ 33 ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾಗಬೇಕಿದ್ದ ರಾವ್, ಈಗ 57 ರ ವಯಸ್ಸಿನಲ್ಲಿ ಶಿಕ್ಷಕರಾಗುತ್ತಿದ್ದಾರೆ. ಈ ಯಡವಟ್ಟಿಗೆ ಕಾರಣವಾಗಿದ್ದು ಕಡತವನ್ನು ಇತ್ಯರ್ಥಗೊಳಿಸುವಲ್ಲಿ ಆದ ವಿಳಂಬ.
ಪಟಾಪಟ್ನಂನ ನಿವಾಸಿ, ಅಲ್ಲಕ ಕೇದಾರೇಶ್ವರ ರಾವ್ ಬಿ.ಎಡ್ ಪದವೀಧರ. ಡಿಎಸ್ ಸಿ-1998 ರಲ್ಲಿ ಶಿಕ್ಷಕರಾಗಿ ಉದ್ಯೋಗ ಪಡೆಯುವವರಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಉತ್ತಮ ಅಂಕ ಗಳಿಸಿದ್ದರೂ ಕೆಲವು ಕಾನೂನಾತ್ಮಕ ವಿಷಯಗಳಿಂದಾಗಿ ಕಡತ ವಿಲೇವಾರಿ ವಿಳಂಬವಾಗಿತ್ತು. ಜೀವನೋಪಾಯಕ್ಕಾಗಿ ಊರಿನಲ್ಲಿಯೇ ಸಣ್ಣ ಪುಟ್ಟ ನೌಕರಿ ಮಾಡಿಕೊಂಡಿದ್ದ ರಾವ್, ಬಳಿಕ ತಮ್ಮ ತಾಯಿಯೊಂದಿಗೆ ಹೈದರಾಬಾದ್ ಹಾದಿ ಹಿಡಿದರು. ಅಲ್ಲಿಯೂ ಸೂಕ್ತ ಉದ್ಯೋಗ ಸಿಗಲಿಲ್ಲ. ಒಂದೆಡೆ ನಿರುದ್ಯೋಗ, ಇನ್ನೊಂದೆಡೆ ತನ್ನ ತಾಯಿಯನ್ನು ಕಳೆದುಕೊಂಡ ನೋವು ಅವರನ್ನು ಖಿನ್ನತೆಗೆ ದೂಡಿತ್ತು. ಸಂಬಂಧಿಕರೂ ಅವರ ನೆರವಿಗೆ ಬಂದಿರಲಿಲ್ಲ. ಎಂಟು ವರ್ಷಗಳ ಹಿಂದೆ ಮತ್ತೆ ತಮ್ಮ ಊರಿಗೆ ಆಗಮಿಸಿದ ರಾವ್, ಹೊಟ್ಟೆಪಾಡಿಗಾಗಿ ಭಿಕ್ಷಾಟನೆಗೆ ಇಳಿದರು.
ಈ ನಡುವೆ ಡಿಎಸ್ ಸಿ-1998 ಕಡತ ವಿಲೇವಾರಿಯಾಗಿದ್ದು, ಇದರ ಬೆನ್ನಲ್ಲೇ ರಾವ್, ಸಂತಸ ಮತ್ತು ಉತ್ಸಾಹದಿಂದ ಮಾತನಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಇದು ಎಲ್ಲರ ಗಮನಸೆಳೆಯಲು ಕಾರಣವಾಗುತ್ತದೆ. ರಾವ್ ಮಾನಸಿಕ ಎಂದು ಜರಿದವರೇ ಅವರಿಗೆ ಹೊಸ ಬಟ್ಟೆ, ಆಹಾರ ನೀಡಿ ಸತ್ಕರಿಸುತ್ತಾರೆ. ಕಣ್ಮುಚ್ಚಿ ತೆರೆಯುವುದರೊಳಗೆ ಕೇದಾರೇಶ್ವರ ರಾವ್ ಪೆದ್ದ ಸಿಧಿಯಲ್ಲಿ ಸ್ಟಾರ್ ಆಗುತ್ತಾರೆ. ಖುದ್ದು ಗ್ರಾಮಸ್ಥರೇ ಅವರನ್ನು ಶಾಲು ಹೊದಿಸಿ ಸನ್ಮಾನವನ್ನೂ ಮಾಡುತ್ತಾರೆ.
ಅಂತೂ ರಾವ್ ಅಂದು ಕಂಡ ಕನಸು ಈಗ ಕೊನೆಗೂ ನನಸಾಗಿದ್ದು, ತಮ್ಮ 57ನೇ ವಯಸ್ಸಿನಲ್ಲಿ ಅವರು ಶಿಕ್ಷಕರಾಗಲು ಸಜ್ಜಾಗುತ್ತಿದ್ದಾರೆ.