ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಫೈಟ್: ಉಪವಾಸ ಸತ್ಯಾಗ್ರಹಕ್ಕಿಳಿದ ಸಚಿನ್ ಪೈಲಟ್ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ನಡುವಿನ ಜಟಾಪಟಿ ಮುಂದುವರಿದಿದೆ. ಸಿಎಂ ಅಶೋಕ್ ಗೆಹ್ಲೋಟ್ ವರ್ಸಸ್ ಸಚಿನ್ ಪೈಲಟ್ ನಡುವೆ ಜಿದ್ದಾಜಿದ್ದಿನ ಕಣ ಏರ್ಪಟ್ಟಿದೆ. ಇದೀಗ ಸಚಿನ್ ಪೈಲಟ್ ಅವರ ಉಪವಾಸ ಸತ್ಯಾಗ್ರಹ ರಾಜಕೀಯ ಚರ್ಚೆಯ ವಿಷಯವಾಗಿದೆ. ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕಾರ್ಯಕರ್ತರೊಂದಿಗೆ ಜೈಪುರದ ಶಹೀದ್ ಸ್ಮಾರಕದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಇಡೀ ದಿನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸಚಿನ್ ಪೈಲಟ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಘೋಷಿಸಿದಾಗಿನಿಂದ, ಕಾಂಗ್ರೆಸ್‌ನಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ. ಆಂತರಿಕ ರಾಜಕೀಯ ಮತ್ತೆ ಬಿಸಿಯಾಗಿದೆ.

ವಸುಂಧರಾ ರಾಜೇ ಸಿಎಂ ಆಗಿದ್ದಾಗ ನಡೆದಿರುವ ಹಗರಣಗಳ ಬಗ್ಗೆ ಕ್ರಮ ಕೈಗೊಳ್ಳದಿರುವ ವಿಚಾರವನ್ನು ಮುಂದಿಟ್ಟುಕೊಂಡು ಪೈಲಟ್ ಉಪವಾಸ ಸತ್ಯಾಗ್ರಹ ನಡೆಸಿದರು. ಉಪವಾಸ ದೀಕ್ಷೆ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿದೆ. ಪೈಲಟ್ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲು ರಾಜ್ಯಾದ್ಯಂತ ಅವರ ಬೆಂಬಲಿಗರು ಜೈಪುರ ತಲುಪುತ್ತಿದ್ದಾರೆ. ಪೈಲಟ್ ಪರ ನಾಯಕರು ಮತ್ತು ಶಾಸಕರು ಆಯ್ದ ಬೆಂಬಲಿಗರಿಗೆ ಜೈಪುರ ತಲುಪುವಂತೆ ಸಂದೇಶ ಕಳುಹಿಸಿದ್ದಾರೆ. ಜೈಪುರದ ಹುತಾತ್ಮರ ಸ್ಮಾರಕದಲ್ಲಿ ಮಂಗಳವಾರ ಆರಂಭವಾದ ಸಚಿನ್ ಪೈಲಟ್ ಉಪವಾಸ ಸತ್ಯಾಗ್ರಹದ ಸಿದ್ಧತೆ ಸೋಮವಾರ ತಡರಾತ್ರಿಯವರೆಗೂ ಮುಂದುವರಿದಿತ್ತು.

ಕಳೆದ ಎರಡು ದಶಕಗಳಲ್ಲಿ ಕಾಂಗ್ರೆಸ್ ತನ್ನದೇ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಇದೇ ಮೊದಲು. ಮತ್ತೊಂದೆಡೆ, ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವಾ ಅವರು ಪೈಲಟ್ ಕ್ರಮವನ್ನು ಪಕ್ಷ ವಿರೋಧಿ ನಡೆ ಎಂದು ಬಣ್ಣಿಸಿದ್ದಾರೆ. ಪೈಲಟ್ ದೀಕ್ಷೆಯ ದೃಷ್ಟಿಯಿಂದ ರಾಜ್ಯ ಉಸ್ತುವಾರಿ ಸುಖಜಿಂದರ್ ರಾಂಧವಾ ಮಂಗಳವಾರ ಮಧ್ಯಾಹ್ನ ಜೈಪುರಕ್ಕೆ ಭೇಟಿ ನೀಡಲಿದ್ದಾರೆ. ರಾಂಧವಾ ಅವರು ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರ ಅವರನ್ನು ಭೇಟಿ ಮಾಡಲಿದ್ದಾರೆ. ರಾಂಧವಾ ಅವರ ಹೇಳಿಕೆ ಪಕ್ಷದ ಕಠಿಣ ನಿಲುವನ್ನು ಸೂಚಿಸುತ್ತದೆ.

ಸೋಮವಾರ ತಡರಾತ್ರಿ ಹೇಳಿಕೆ ನೀಡಿರುವ ಅವರು, ‘ಸಚಿನ್ ಪೈಲಟ್ ಅವರ ಉಪವಾಸ ಸತ್ಯಾಗ್ರಹ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಪಕ್ಷ ವಿರೋಧಿ ಕೃತ್ಯವಾಗಿದೆ. ಅವರದೇ ಸರ್ಕಾರದಿಂದ ಏನಾದರೂ ಸಮಸ್ಯೆಯಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದು, ಮಾಧ್ಯಮ ಮತ್ತು ಸಾರ್ವಜನಿಕರಲ್ಲಿ ಅಲ್ಲ. ನಾನು ಕಳೆದ 5 ತಿಂಗಳಿಂದ ಎಐಸಿಸಿಯ ಉಸ್ತುವಾರಿಯಲ್ಲಿದ್ದೇನೆ ಪೈಲಟ್ ನನ್ನೊಂದಿಗೆ ಈ ವಿಷಯವನ್ನು ಎಂದಿಗೂ ಚರ್ಚಿಸಲಿಲ್ಲ. ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಶಾಂತಿಯುತವಾಗಿ ಮಾತನಾಡಲು ಮನವಿ ಮಾಡುತ್ತೇನೆ. ಏಕೆಂದರೆ ಅವರು ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಪ್ರಬಲ ಆಧಾರಸ್ತಂಭವಾಗಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!