ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾದ ಮಾಜಿ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ (Muttiah Muralitharan) ಅವರ ಜೀವನದ ಕುರಿತು ಸಿನಿಮಾಕ್ಕೆ ‘800’ ಎಂದು ಹೆಸರು ಇಡಲಾಗಿದೆ. ಬಹುಭಾಷೆಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಮೇಲೆ ಕ್ರಿಕೆಟ್ ಪ್ರೇಮಿಗಳು ಹಾಗೂ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದೀಗ ‘800’ ಚಿತ್ರದ ಟ್ರೇಲರ್ ಬಿಡುಗಡೆಗೆ ಸಿದ್ದವಾಗಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಆಗಮಿಸಲಿದ್ದಾರೆ.
ಸೆಪ್ಟೆಂಬರ್ 5ರಂದು ಮುಂಬೈನಲ್ಲಿ ‘800’ ಸಿನಿಮಾ (800 Movie) ಟ್ರೇಲರ್ ಲಾಂಚ್ ಆಗಲಿದೆ. ಸಚಿನ್ ತೆಂಡೂಲ್ಕರ್ (Sachin Tendulkar) ಮಾತ್ರವಲ್ಲದೇ ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ.
ಕ್ರಿಕೆಟರ್ಗಳ ಜೀವನದ ಕುರಿತು ಅನೇಕ ಸಿನಿಮಾಗಳು ಈಗಾಗಲೇ ಬಂದಿವೆ. ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡಿದ ದಿಗ್ಗಜರ ಬದುಕು ಎಲ್ಲರಿಗೂ ಸ್ಫೂರ್ತಿ ಆಗಲಿ ಎಂಬ ಉದ್ದೇಶದಿಂದ ಇಂಥ ಸಿನಿಮಾ ಮಾಡಲಾಗುತ್ತದೆ.ಮುತ್ತಯ್ಯ ಮುರಳೀಧರನ್ ಅವರ ಬದುಕಿನ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘800’ ಸಿನಿಮಾ ಮೂಡಿಬಂದಿದ್ದು, ಅವರ ಅಭಿಮಾನಿಗಳಲ್ಲಿ ಕೌತುಕ ಸೃಷ್ಟಿ ಮಾಡಿದೆ.
ಎಂ.ಎಸ್. ಶ್ರೀಪತಿ ಅವರು ‘800’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಗಿಬ್ರಾನ್ ಅವರು ಸಂಗೀತ ನೀಡಿದ್ದಾರೆ. ‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾ ಖ್ಯಾತಿಯ ನಟ ಮಧುರ್ ಮಿತ್ತಲ್ ಅವರು ‘800’ ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್ ಪಾತ್ರವನ್ನು ಮಾಡಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಮಹಿಮಾ ನಂಬಿಯಾರ್ ಅವರು ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಅಕ್ಟೋಬರ್ನಲ್ಲಿ ಬಿಡುಗಡೆ ಆಗಲಿದೆ.