ಕೇಸರಿ ಶಲ್ಯ ಧರಿಸಿದ್ದಕ್ಕೆ ಹಲ್ಲೆ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

ಹೊಸದಿಗಂತ ವರದಿ,ಮಡಿಕೇರಿ:

ಕೇಸರಿ ಶಲ್ಯ ಧರಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ವಿದ್ಯಾರ್ಥಿ ನಿಲಯದ ಸ್ನೇಹಿತರಿಂದಲೇ ಹಲ್ಲೆ ನಡೆದಿದ್ದು, ಇದರಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಗೂ ಕುಶಾಲನಗರದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿದ್ದ ಅಂತೋಣಿ ಪ್ರಜ್ವಲ್ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ.
ಹಿಜಾಬ್ ಧರಿಸುವುದರ ವಿರುದ್ಧ ಮಂಗಳವಾರ ಕುಶಾಲನಗರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಅಂತೋಣಿ ಕೇಸರಿ ಶಾಲು ಧರಿಸಿದ್ದನೆನ್ನಲಾಗಿದ್ದು, ಇದನ್ನು ಸಹಿಸದ ಹಾಸ್ಟೆಲ್’ನಲ್ಲಿದ್ದ ಅನ್ಯ ಕೋಮಿನ ಏಳು ಮಂದಿ ವಿದ್ಯಾರ್ಥಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರೆನ್ನಾಗಿದೆ. ಈ ಸಂಬಂಧ ಏಳು ಮಂದಿಯ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಓರ್ವನನ್ನು ಮಾತ್ರ ವಿಚಾರಣೆ ನಡೆಸಿದ್ದರೆಂದು ಹೇಳಲಾಗಿದೆ.
ಇದರಿಂದ‌ ಮನನೊಂದ ಅಂತೋಣಿ ಪ್ರಜ್ವಲ್, ತನಗೆ ಸೂಕ್ತ ನ್ಯಾಯ ದೊರಕಿಲ್ಲ ಎಂದು ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ನಂತರ ತಾನು ವಿಷ ಸೇವಿಸಿರುವುದಾಗಿ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದು, ಸಕಾಲದಲ್ಲಿ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಈ ಪ್ರಕರಣ ಸಂಬಂಧ ಕುಶಾಲನಗರ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.
ಹಾಸ್ಟೆಲ್‍ನಲ್ಲಿ ಅನ್ಯ ಕೋಮಿನವರಿಂದ ಭಯ ಹಾಗೂ ಆತಂಕ ಇದೆ. ವಾರ್ಡನ್’ನಿಂದಲೂ ತಾರತಮ್ಯ ಹಾಗೂ ಬೆದರಿಕೆ ಇದೆ ಎಂಬ ಆರೋಪವೂ ಕೇಳಿ ಬಂದಿದೆ.
ಆರು ಮಂದಿ ವಿರುದ್ಧ ಎಫ್ ಐಆರ್: ಮತ್ತೊಂದೆಡೆ
ಕೇಸರಿ ಶಾಲು ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದನ್ನು ಪ್ರಶ್ನಿಸಿದ ವಿಚಾರವಾಗಿ ಇಲ್ಲಿನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಕ್ಕೆ ನುಗ್ಗಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಬಿಜೆಪಿ ಹಾಗೂ ಹಿಂದೂ ಜಾಗರಣಾ ವೇದಿಕೆ ಮುಖಂಡರು ಸೇರಿದಂತೆ ಆರು ಮಂದಿ ವಿರುದ್ಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
ಬಿಜೆಪಿ ಯುವ ಘಟಕದ ಕಾರ್ಯದರ್ಶಿ ನವನೀತ್‌, ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಮಧು, ಲಕ್ಷ್ಮೀನಾರಾಯಣ, ಅವರ ಬೆಂಬಲಿಗರಾದ ಸಂದೀಪ್‌, ಅನಂತನಾರಾಯಣ, ಗಣಪತಿ ಹಾಗೂ ಮಧು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಠಾಣಾ ಜಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮಂಗಳವಾರ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ವಿರೋಧಿಸಿ, ಕೇಸರಿ ಶಾಲು ಧರಿಸಿ ಪ್ರತಿಭಟಿಸಿದ್ದರು. ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಅಂತೋಣಿ ಪ್ರಜ್ವಲ್ ಕೇಸರಿ ಶಾಲು ಧರಿಸಿ‌ ಪಾಲ್ಗೊಂಡು, ವಾಪಸ್ಸಾದಾಗ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾದ ಆಸ್ಕರ್, ಮಹಮ್ಮದ್ ಪ್ರಶ್ನಿಸಿದ್ದರು. ಆಗ ಮೂವರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಚಾರವನ್ನು ಅಂತೋಣಿ, ಹಿಂದೂ ಸಂಘಟನೆ ಮುಖಂಡರಿಗೆ ತಿಳಿಸಿದ್ದರಿಂದ ಅವರು ಹಾಸ್ಟೆಲ್‌ಗೆ ನುಗ್ಗಿ ಮಹಮ್ಮದ್ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
‘ಹಾಸ್ಟೆಲ್‌ಗೆ ನುಗ್ಗಿ ಆರು ಮಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಮಹಮ್ಮದ್ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೋಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಅಂತೋಣಿ ಕೂಡಾ ಮಹಮ್ಮದ್, ಆಸ್ಕರ್ ಸೇರಿ ಆರು ಮಂದಿ ವಿರುದ್ಧ ಪ್ರತಿದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿಲ್ಲ ಎನ್ನಲಾಗಿದೆ. ಪರಿಣಾಮವಾಗಿ ಆತ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!