Sunday, September 25, 2022

Latest Posts

ಚಾಕು ಇರಿತಕ್ಕೊಳಗಾದ ಲೇಖಕ ಸಲ್ಮಾನ್‌ ರಶ್ದಿ ಸ್ಥಿತಿ ಗಂಭೀರ, ಕಣ್ಣಿಗೆ ತೀವ್ರ ಹಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಶುಕ್ರವಾರ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಲವು ಬಾರಿ ಇರಿತಕ್ಕೊಳಗಾದ ಲೇಖಕ ಸಲ್ಮಾನ್ ರಶ್ದಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಅವರ ತೋಳುಗಳಲ್ಲಿನ ನರಗಳು ಕತ್ತರಿಸಲ್ಪಟ್ಟಿವೆ. ಚಾಕು ಇರಿತದಿಂದ ಅವರ ಯಕೃತ್ತು ಹಾನಿಗೊಳಗಾಗಿದೆ, ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ರಶ್ದಿಯ ಮೇಲೆ ದಾಳಿ ನಡೆಸಿದ ಶಂಕಿತ ಆರೋಪಿಯನ್ನು ನ್ಯೂಜೆರ್ಸಿಯ ಹಾದಿ ಮತರ್ (24) ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಶುಕ್ರವಾರ ಪಶ್ಚಿಮ ನ್ಯೂಯಾರ್ಕ್‌ನ ಚೌಟೌಕ್ವಾ ಇನ್‌ಸ್ಟಿಟ್ಯೂಟ್‌ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ಸಲ್ಮಾನ್ ರಶ್ದಿ ಅವರನ್ನು ಚಾಕುವಿನಿಂದ ಇರಿಯಲಾಗಿತ್ತು. 75ರ ಹರೆಯದ ರಶ್ದಿ ಅವರು ವೇದಿಕೆ ಹತ್ತುತ್ತಿದ್ದಂತೆ ನುಗ್ಗಿದ್ದ ದಾಳಿಕೋರರು ಚಾಕುವಿನಿಂದ ಇರಿದಿದ್ದರು.
ಲೇಖಕರನ್ನು ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಗಾಯಗಳಿಗೆ ಚಿಕಿತ್ಸೆ ನೀಡಲು ಶಸ್ತ್ರಚಿಕಿತ್ಸೆಗೆ ಒಳಗಾದರು. ಸಲ್ಮಾನ್ ರಶ್ದಿಯವರು ತಮ್ಮ ಬೂಕರ್ ಪ್ರಶಸ್ತಿ ವಿಜೇತ 1981 ರ ಕಾದಂಬರಿ ‘ಮಿಡ್‌ನೈಟ್ಸ್ ಚಿಲ್ಡ್ರನ್’ ಮೂಲಕ ಪ್ರಾಮುಖ್ಯತೆ ಪಡೆದಿದ್ದರು. ‘ದಿ ಸೈಟಾನಿಕ್ ವರ್ಸಸ್’ ನಂತರ ಅವರ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧವಾಯಿತು. 1988 ರಿಂದ ಇರಾನ್‌ನಲ್ಲಿ ಪುಸ್ತಕವನ್ನು ನಿಷೇಧಿಸಲಾಗಿದೆ, ಏಕೆಂದರೆ ಅನೇಕ ಮುಸ್ಲಿಮರು ಇದನ್ನು ಧರ್ಮನಿಂದೆಯೆಂದು ಪರಿಗಣಿಸುತ್ತಾರೆ.
ಭಾರತೀಯ ಮೂಲದ ರಶ್ದಿ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರ ನಾಲ್ಕನೇ ಪುಸ್ತಕ, ದಿ ಸೈಟಾನಿಕ್ ವರ್ಸಸ್ ವಿವಾದದ ನಂತರ, ಅವರು ಸಾರ್ವಜನಿಕರ ಕಣ್ಣಿನಿಂದ ದೂರವಿದ್ದರು. ಹೆಚ್ಚಾಗಿ ಯುಕೆಯಲ್ಲಿ ವಾಸಿಸುತ್ತಿದ್ದರು. ಬೆದರಿಕೆಗಳ ಹೊರತಾಗಿಯೂ, ಅವರು 1990 ರ ದಶಕದ ಉದ್ದಕ್ಕೂ ಹಲವಾರು ಕಾದಂಬರಿಗಳನ್ನು ಬರೆದಿದ್ದರು. ಸಲ್ಮಾನ್ ರಶ್ದಿ ಮೇಲಿನ ದಾಳಿಯನ್ನು ಜಗತ್ತಿನಾದ್ಯಂತ ಸಾಹಿತಿಗಳು ಖಂಡಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!