ನಾವು ಪ್ರತಿದಿನ ಎಷ್ಟೋ ಬಸ್‌ಗಳನ್ನು ನೋಡ್ತೀವಿ, ಹತ್ತುತೀವಿ, ಇಳಿತೀವಿ. ನಮಗೆ ಬಸ್ ಅಂದ್ರೆ ಕೇವಲ ಒಂದು ಊರಿಂದ ಇನ್ನೊಂದು ಊರಿಗೆ ಹೋಗೋಕೆ ಇರೋ ರೋಡ್ ಮೇಲಿನ ಗಾಡಿ ಅಷ್ಟೇ. ಆದ್ರೆ, ದಿನವಿಡೀ ಅದೇ ಬಸ್‌ನ ಸ್ಟೇರಿಂಗ್ ಹಿಡಿದು, ನೂರಾರು ಜನರನ್ನ ಸುರಕ್ಷಿತವಾಗಿ ಕೊಂಡೊಯ್ಯುವ ಡ್ರೈವರ್‌ಗೆ ಆ ಬಸ್ಸು ಬರೀ ಗಾಡಿಯಾಗಿ ಉಳಿಯಲ್ಲ. ಅದು ಅವರ ಸಂಸಾರ ಸಾಕೋ ಲಕ್ಷ್ಮಿ, ಅವರ ದಿನನಿತ್ಯದ ಬದುಕಿನ ಜೀವಂತ ಭಾಗವಾಗಿಬಿಡುತ್ತೆ.
ಇಂತಹುದೇ ಒಂದು ಘಟನೆ ಈಗ ಎಲ್ಲರ ಹೃದಯ ಮುಟ್ಟಿದೆ. ಕೇರಳದ ರಸ್ತೆ ಸಾರಿಗೆ ಸಂಸ್ಥೆಯ ಡ್ರೈವರ್ ಪೌಲ್ ಕುರಿಯನ್ ಅವರು ಬರೋಬ್ಬರಿ 18 ವರ್ಷಗಳ ಕಾಲ ಚಾಲಕನಾಗಿ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ ವಿಶೇಷ ಏನಪ್ಪಾ ಅಂದ್ರೆ, ಕಳೆದ 8 ವರ್ಷಗಳಿಂದ ಅವರು ಇಡುಕ್ಕಿ-ಕುಮಿಲಿ ರೂಟ್‌ನಲ್ಲಿ ಒಂದೇ ಬಸ್ಸನ್ನು ಪ್ರೀತಿಯಿಂದ ಓಡಿಸಿಕೊಂಡು ಬಂದಿದ್ದಾರೆ.
ಅಕ್ಟೋಬರ್ 31ಕ್ಕೆ ಪೌಲ್ ಅವರು ಅಧಿಕೃತವಾಗಿ ರಿಟೈರ್ಡ್ ಆಗ್ತಿದ್ದಾರೆ. ಆದ್ರೆ, ಈ ಮಂಗಳವಾರವೇ ಅವರ ಡ್ಯೂಟಿಯ ಕೊನೆಯ ದಿನವಾಗಿತ್ತು. ಆ ದಿನ ಬಸ್ ಆಫ್ ಮಾಡಿ ಕೆಳಗಿಳಿದ ಪೌಲ್ ಅವರಿಗೆ, 8 ವರ್ಷ ಜೊತೆಗಿದ್ದ ಗಾಡಿಯನ್ನ ಬಿಟ್ಟು ಹೋಗೋಕೆ ಮನಸ್ಸೇ ಬರಲಿಲ್ಲ. ಬಸ್ ಮುಂಭಾಗಕ್ಕೆ ಹೋಗಿ ನಿಂತ ಅವರು, ಕಣ್ಣು ತುಂಬಿ ಆ ಬಸ್ಸಿಗೆ ನಮಸ್ಕರಿಸಿ, ಪ್ರೀತಿಯಿಂದ ಒಂದು ಮುತ್ತಿಟ್ಟರು. 18 ವರ್ಷದ ಸೇವೆ, ಲಕ್ಷಾಂತರ ಕಿಲೋಮೀಟರ್ ಪ್ರಯಾಣ, ಎಣಿಕೆ ಇಲ್ಲದಷ್ಟು ನೆನಪುಗಳು… ಎಲ್ಲವೂ ಆ ಒಂದು ಮುತ್ತಿನಲ್ಲಿ ಅಡಗಿತ್ತು.
ಅಲ್ಲಿಯೇ ಇದ್ದ ಅವರ ಸಹೋದ್ಯೋಗಿಗಳು ಈ ಸುಂದರ ಕ್ಷಣವನ್ನು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಈ ವೀಡಿಯೋ ಫುಲ್ ವೈರಲ್ ಆಗಿಬಿಡ್ತು. “ಇದು ಬರೀ ಕೆಲಸ ಅಲ್ಲ, ವೃತ್ತಿಯ ಮೇಲಿರೋ ಪವಿತ್ರವಾದ ಪ್ರೀತಿ” ಎಂದು ಜನ ಕಾಮೆಂಟ್ ಮಾಡಿ ಪೌಲ್ ಅವರ ಮನಸ್ಸನ್ನು ಮೆಚ್ಚಿಕೊಂಡಿದ್ದಾರೆ.

ಈ ವೀಡಿಯೋ ಕೇರಳದ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರ ಗಮನಕ್ಕೂ ಬಂದಿದೆ. ಅವರು ಈ ವೀಡಿಯೋ ನೋಡಿ, “ತಾನು ದಿನವೂ ಓಡಿಸುತ್ತಿದ್ದ ಬಸ್ಸಿಗೆ ಪೌಲ್ ಅವರು ಗೌರವ ಸಲ್ಲಿಸಿದ ರೀತಿ ನನ್ನ ಹೃದಯ ಮುಟ್ಟಿದೆ. ಇಂತಹ ಸಾವಿರಾರು ಉದ್ಯೋಗಿಗಳ ಶ್ರಮ ಮತ್ತು ಅಭಿಮಾನವೇ ನಮ್ಮ ಸಾರಿಗೆ ವ್ಯವಸ್ಥೆಯ ಬೆನ್ನೆಲುಬು” ಅಂತ ಬಹಿರಂಗವಾಗಿಯೇ ಹೊಗಳಿದ್ದಾರೆ.
ಯಾವುದೇ ಕೆಲಸ ಇರಲಿ, ಅದನ್ನ ನಾವು ಎಷ್ಟು ಪ್ರೀತಿಯಿಂದ ಮಾಡ್ತೀವಿ ಅನ್ನೋದಕ್ಕೆ ಪೌಲ್ ಕುರಿಯನ್ ಅವರ ಈ ಭಾವನಾತ್ಮಕ ವಿದಾಯವೇ ಸಾಕ್ಷಿ!



