ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಇನ್ನೂ ಶಮನವಾಗದ ನಡುವೆಯೇ, ಭಾರತದ ಇಂಧನ ಭದ್ರತೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಹಾರ್ಮುಜ್ ಜಲಸಂಧಿಯಲ್ಲಿನ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾ, 45 ಸಾವಿರ ಟನ್ ಎಲ್‌ಪಿಜಿ ಸಾಗಿಸುತ್ತಿರುವ ‘ಸರ್ವ ಶಕ್ತಿ’ ಸೂಪರ್‌ಟ್ಯಾಂಕರ್ ಭಾರತತ್ತ ಪ್ರಯಾಣ ಮುಂದುವರಿಸಿದೆ.
ಅಮೆರಿಕ-ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮತ್ತು ಅನಿಲ ಪೂರೈಕೆ ಸರಪಳಿಯಲ್ಲಿ ಅಡಚಣೆ ಉಂಟಾಗಿದ್ದು, ಭಾರತದಲ್ಲೂ ಅಡುಗೆ ಅನಿಲ ಲಭ್ಯತೆ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸವಾಲಿನ ಸಮಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಖರೀದಿಸಿರುವ ಈ ಬೃಹತ್ ಎಲ್‌ಪಿಜಿ ಸರಕು ದೇಶದ ಅಗತ್ಯಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ:
ಈ ಹಡಗಿನಲ್ಲಿ 20 ಸಿಬ್ಬಂದಿ ಇದ್ದು, ಅವರಲ್ಲಿ 18 ಮಂದಿ ಭಾರತೀಯರು ಎನ್ನಲಾಗಿದೆ. ‘ಸರ್ವ ಶಕ್ತಿ’ ವಿಶಾಖಪಟ್ಟಣ ತೀರಕ್ಕೆ ಮೇ 13ರಂದು ತಲುಪುವ ಸಾಧ್ಯತೆ ಇದೆ. ಸುರಕ್ಷಿತವಾಗಿ ಗಮ್ಯ ತಲುಪಿದರೆ ಮಾರುಕಟ್ಟೆಯಲ್ಲಿನ ಎಲ್‌ಪಿಜಿ ಕೊರತೆ ತಗ್ಗಿಸಲು ಇದು ಮಹತ್ವದ ಪಾತ್ರ ವಹಿಸಲಿದೆ.
ಹಾರ್ಮುಜ್ ಮಾರ್ಗದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಈ ಹೊತ್ತಿನಲ್ಲಿ, ಭಾರತದ ಈ ಸಾಗಾಟ ಕಾರ್ಯಾಚರಣೆ ಜಾಗತಿಕ ಗಮನ ಸೆಳೆದಿದೆ.



