April 15, 2026
Wednesday, April 15, 2026
spot_img

ಪಾಕಿಸ್ತಾನಕ್ಕೆ ಸೌದಿ ‘ಬೂಸ್ಟರ್ ಡೋಸ್’: ದಿವಾಳಿಯಾಗುವ ಭೀತಿಯಲ್ಲಿದ್ದ ದೇಶಕ್ಕೆ ಆನೆಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್ಥಿಕ ಪಾತಾಳಕ್ಕೆ ಕುಸಿಯುತ್ತಿದ್ದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಮತ್ತೊಮ್ಮೆ ಸಂಜೀವಿನಿಯಾಗಿದೆ. ತೀವ್ರ ಹಣಕಾಸಿನ ಬಿಕ್ಕಟ್ಟಿನಿಂದ ಕಂಗಾಲಾಗಿದ್ದ ನೆರೆ ರಾಷ್ಟ್ರಕ್ಕೆ ಸೌದಿ ಸರ್ಕಾರವು 3 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚುವರಿ ನೆರವಿನ ಹಸ್ತ ಚಾಚಿದೆ. ಇದರೊಂದಿಗೆ, ಈಗಾಗಲೇ ನೀಡಿದ್ದ 5 ಬಿಲಿಯನ್ ಡಾಲರ್ ಸಾಲದ ಅವಧಿಯನ್ನು ಏಕಾಏಕಿ ಮೂರು ವರ್ಷಗಳವರೆಗೆ ವಿಸ್ತರಿಸುವ ಮೂಲಕ ಪಾಕಿಸ್ತಾನದ ಆತಂಕವನ್ನು ದೂರ ಮಾಡಿದೆ.

ಈ ತಿಂಗಳ ಅಂತ್ಯದ ವೇಳೆಗೆ ಪಾಕಿಸ್ತಾನವು ಯುಎಇಗೆ 3.5 ಬಿಲಿಯನ್ ಡಾಲರ್ ಸಾಲ ಮರುಪಾವತಿ ಮಾಡಬೇಕಿತ್ತು. ಒಂದು ವೇಳೆ ಈ ಹಣ ಹೊಂದಿಸದಿದ್ದರೆ ದೇಶದ ಬೊಕ್ಕಸ ಸಂಪೂರ್ಣ ಖಾಲಿಯಾಗಿ ದಿವಾಳಿ ಘೋಷಿಸಬೇಕಾದ ಪರಿಸ್ಥಿತಿ ಇತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಸೌದಿ ನೀಡಿದ ಈ ಬೆಂಬಲ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರಕ್ಕೆ ದೊಡ್ಡ ಸಮಾಧಾನ ತಂದಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯಲು ಪಾಕಿಸ್ತಾನಕ್ಕೆ ಮಿತ್ರ ರಾಷ್ಟ್ರಗಳ ಬೆಂಬಲ ಅನಿವಾರ್ಯವಾಗಿತ್ತು. ಸೌದಿ, ಚೀನಾ ಮತ್ತು ಯುಎಇ ದೇಶಗಳು ತಮ್ಮ ಠೇವಣಿಯನ್ನು ಕನಿಷ್ಠ 3 ವರ್ಷಗಳ ಕಾಲ ವಾಪಸ್ ಪಡೆಯಬಾರದು ಎಂಬುದು ಐಎಂಎಫ್ ಷರತ್ತಾಗಿತ್ತು. ಈಗ ಸೌದಿ ಅರೇಬಿಯಾ ಇದಕ್ಕೆ ಸಮ್ಮತಿಸಿರುವುದರಿಂದ, ಐಎಂಎಫ್‌ನಿಂದ ಪಾಕಿಸ್ತಾನಕ್ಕೆ ಮತ್ತಷ್ಟು ಸಾಲ ಸಿಗುವ ಹಾದಿ ಸುಗಮಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !