ಸೂರ್ಯನ ಪ್ರಭೆಯನ್ನು ಪ್ರಯೋಗಾಲಯದಲ್ಲೇ ಸೃಷ್ಟಿಸೋ ಅಣುಮಿಲನ ಪ್ರಕ್ರಿಯೆಯಲ್ಲಿ ವಿಜ್ಞಾನಿಗಳು ಯಶಸ್ವಿ, ಭವಿಷ್ಯದ ಇಂಧನ ಮಾರುಕಟ್ಟೆಯನ್ನು ಬದಲಿಸಲಿರೋ ಶೋಧವಿದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತನ್ನ ವಿಶಿಷ್ಟವಾದ ಮೇಧಾ ಶಕ್ತಿಯಿಂದ ಮಾನವ ಇತರ ಪ್ರಾಣಿಗಳಿಗಿಂತ ಭಿನ್ನ. ತನ್ನ ಸಂಶೋಧನಾ ಪ್ರವೃತ್ತಿಯಿಂದ ಆತ ಇಂದು ಚಂದ್ರನ ಮೇಲೂ ಕಾಲಿಟ್ಟಿದ್ದಾನೆ, ಸಾಗರದ ಆಳವನ್ನೂ ತಲುಪಿದ್ದಾನೆ. ಆತ ತನ್ನ ಅಗತ್ಯತೆಗೆ ತಕ್ಕಂತೆ ವಸ್ತುಗಳನ್ನು ಸೃಷ್ಟಿಸಿಬಲ್ಲ. ಆತನ ಸಂಶೋಧನೆಗೆ ಇದೀಗ ಮತ್ತೊಂದು ಗರಿಮೆ ಮೂಡಿದ್ದು ಸೂರ್ಯ ಹಾಗೂ ನಕ್ಷತ್ರಗಳು ಹೊಳೆಯುವಂತೆ ಮಾಡುವ ಅಣುಮಿಲನ ಪ್ರಕ್ರಿಯೆಯನ್ನು ಪ್ರಯೋಗಾಲಯದಲ್ಲಿಯೇ ಸೃಷ್ಟಿಸುವಲ್ಲಿ ವಿಜ್ಞಾನಿಗಳ ತಂಡವೊಂದು ಯಶಸ್ವಿಯಾಗಿದೆ.

ಅಣುಮಿಲನ ಪ್ರಕ್ರಿಯೆಯ ಕುರಿತು ದಶಕಗಳಿಂದ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು, ಕ್ಯಾಲಿಫೋರ್ನಿಯಾದ ಲಾರೆನ್ಸ್ ಲಿವರ್ಮೋರ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಅಣುಮಿಲನ ಪ್ರಕ್ರಿಯೆಯನ್ನು (FUSION ENERGY) ಸೃಷ್ಟಿಸುವಲ್ಲಿ  ಸಫಲರಾಗಿದ್ದು ಇದು ಭವಿಷ್ಯದ ಇಂಧನ ಸಮಸ್ಯೆಗೆ ಪರಿಹಾರವಾಗಬಲ್ಲುದು ಎಂದು ಹೇಳಿದ್ದಾರೆ. ಅಲ್ಲದೇ ಅಣುಮಿಲನ ಪ್ರಕ್ರಿಯೆಯನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸುವ ಸಂದರ್ಭದಲ್ಲಿ ಹಾಕಿದ ಶಕ್ತಿಗಿಂತಲೂ ಹೆಚ್ಚಿನ ಪ್ರಮಾಣದ ಶಕ್ತಿ ಉತ್ಪಾದನೆಯಾಗಿದೆ. “ನಾವು ಹಾಕುವುದಕ್ಕಿಂತ ಹೆಚ್ಚಿನ ಶಕ್ತಿಯನ್ನು ಪಡೆಯಲು ಸಾಧ್ಯವಾಯಿತು ಎಂಬ ಅಂಶವು ಇದು ಸಾಧ್ಯ ಎಂಬುದಕ್ಕೆ ಪುರಾವೆಯನ್ನು ಒದಗಿಸುತ್ತದೆ” ಎಂದು ಲಿವರ್ಮೋರ್ ಲ್ಯಾಬ್‌ನಲ್ಲಿ ಶಸ್ತ್ರಾಸ್ತ್ರ ಭೌತಶಾಸ್ತ್ರ ಮತ್ತು ವಿನ್ಯಾಸದ ಕಾರ್ಯಕ್ರಮ ನಿರ್ದೇಶಕ ಮಾರ್ಕ್ ಹೆರ್ಮನ್ ಹೇಳಿದ್ದಾರೆ.

ಸೂರ್ಯ ಮತ್ತು ನಕ್ಷತ್ರಗಳಿಗೆ ನಿರಂತರವಾಗಿ ಮಿನುಗುವಂತೆ ಮಾಡುವ ಈ ಅಣುಮಿಲನ ಪ್ರಕ್ರಿಯೆಯು ನಿರಂತರವಾಗಿ ಹೈಡ್ರೋಜನ್ ಪರಮಾಣುಗಳನ್ನು ಹೀಲಿಯಂ ಆಗಿ ಸಂಯೋಜಿಸುತ್ತದೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಉಷ್ಣತೆ ಸೃಷ್ಟಿಯಾಗುತ್ತದೆ. ಇಂದು ಸೂರ್ಯನಿಂದ ನಮಗೆ ಶಾಖರೂಪದಲ್ಲಿ ಶಕ್ತಿ ದೊರೆಯುವುದಕ್ಕೆ ಕಾರಣವಾಗಿರುವುದು ಇದೇ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನೀಗ ಪ್ರಯೋಗಾಲಯದಲ್ಲಿ  ಪ್ರಾಯೋಗಿಕವಾಗಿ ನಡೆಸಿ ಯಶ ಪಡೆಯಲಾಗಿದೆ. “ಇದನ್ನು ಸುಧಾರಿತ ಪ್ರಯೋಗಗಳೊಂದಿಗೆ ನಿರ್ಮಿಸಿದರೆ ನಮಗೆ ಭವಿಷ್ಯದಲ್ಲಿ ಶಕ್ತಿಯ ಮೂಲವಾಗಬಹುದು” ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.

ಇದು ಪಳೆಯುಳಿಕೆ ಇಂಧನಗಳ ದಹನದಿಂದ ಉತ್ಪತ್ತಿಯಾಗುವ ಮಾಲಿನ್ಯ ಮತ್ತು ಹಸಿರುಮನೆ ಅನಿಲಗಳನ್ನು  ಹೊಂದಿರುವುದಿಲ್ಲವಾದ್ದರಿಂದ ಪರಿಸರದ ದೃಷ್ಟಿಯಿಂದಲೂ ಈ ಅಣುಮಿಲನ ಪ್ರಕ್ರಿಯೆಯು ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೇ ಶಕ್ತಿಯನ್ನು ಉತ್ಪಾದಿಸಲು ಯುರೇನಿಯಂನ ವಿಭಜನೆಯನ್ನು ಬಳಸುವ ಪ್ರಸ್ತುತ ಪರಮಾಣು ವಿದ್ಯುತ್ ಸ್ಥಾವರಗಳಿಂದ ಹೊರಹೊಮ್ಮುವಂತೆ ವಿಕಿರಣಶೀಲ ತ್ಯಾಜ್ಯವನ್ನು ಇದು ಹೊರಸೂಸುವದಿಲ್ಲ. ಹಾಗಾಗಿ ಇದನ್ನು ಶುದ್ಧ ಶಕ್ತಿಯ ಮೂಲವಾಗಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ ಎಂಬುದು ವಿಜ್ಞಾನಿಗಳು ತೆರೆದಿಡೋ ವಿಶ್ಲೇಷಣೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!