ಹೊಸದಿಗಂತ ವರದಿ ಶಿವಮೊಗ್ಗ:
ಕನ್ನಡದ ಪ್ರಸಿದ್ದ ರಂಗ ನಿರ್ದೇಶಕ, ರಂಗ ಶಿಕ್ಷಕ, ಮೈಸೂರು ರಂಗಾಯಣದ ಪ್ರಾಧ್ಯಾಪಕ ಚಿದಂಬರ ರಾವ್ ಜಂಬೆ (77) ಶನಿವಾರ ಹೆಗ್ಗೋಡಿನಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು.
ಚಿದಂಬರ ರಾವ್ ಜಂಬೆ ಹೆಗ್ಗೋಡಿನಲ್ಲಿ ಜನಿಸಿ ರಂಗಭೂಮಿ ಮೂಲಕ ಇಡೀ ನಾಡನ್ನು ಪ್ರಭಾವಿಸಿದ ಮೇರು ವ್ಯಕ್ತಿತ್ವ ಹೊಂದಿದ್ದರು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪ್ರಾಧ್ಯಾಪಕರಾಗಿ, ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಚಾರ್ಯರಾಗಿ, ಮೈಸೂರಿನ ರಂಗಾಯಣ ನಿರ್ದೇಶಕರಾಗಿ ಹಲವು ಆಯಾಮಗಳಲ್ಲಿ ರಂಗಭೂಮಿ ಪುನಶ್ಚೇತನಕ್ಕೆ ತಮ್ಮದೇ ಕೊಡುಗೆ ನೀಡಿದ್ದರು.
ಅನೇಕ ಕೃತಿಗಳನ್ನು ರಂಗಭೂಮಿಗೆ ತರುವ ಜೊತೆಗೆ ಮೈಸೂರು ರಂಗಾಯಣ ನಿರ್ದೇಶಕರಾಗಿದ್ದಾಗ ರಂಗಭೂಮಿಯನ್ನು ಸಮುದಾಯದ ಹತ್ತಿರ ತೆಗೆದುಕೊಂಡು ಹೋಗುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿದ ಅವರ ಸೇವೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಚಾರ್ಯರಾಗಿ ಯುವ ಸಮೂಹವನ್ನು ರಂಗಭೂಮಿಯತ್ತ ತರುವ ನಿಟ್ಟಿನಲ್ಲಿ ಅವರು ಶ್ರಮಿಸಿದ್ದರು.
ಭಾನುವಾರ ಮಧ್ಯಾಹ್ನ 12 ಗಂಟೆಗೆ ಅವರ ಸ್ವಗ್ರಾಮ ಅಡ್ಡೇರಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಹೆಗ್ಗೋಡಿನಲ್ಲಿ ಅಂತಿಮ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.



