ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಮತ್ತು ಭೇಟಿ ನೀಡುವ ಭಕ್ತರ ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಗತ್ಯ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ದೇವಾಲಯದಲ್ಲಿ ನೀಡಲಾಗುವ ಎಲ್ಲಾ ಸೇವೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಲ್ಲೂ ದೇವಸ್ಥಾನದ ಪಾವಿತ್ರ್ಯತೆ ಮತ್ತು ಭಕ್ತರ ಭಾವನೆಯನ್ನು ಗಮದಲ್ಲಿಟ್ಟುಕೊಳ್ಳಬೇಕು. ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣವನ್ನು ಜವಾಬ್ದಾರಿಯುತವಾಗಿ ಅಗತ್ಯ ಯೋಜನೆಗಳಿಗೆ ಮಾತ್ರ ಖರ್ಚು ಮಾಡಬೇಕು ಎಂದರು.
ಅಭಿವೃದ್ಧಿಯ ನೆಪದಲ್ಲಿ ಅನಗತ್ಯ ವೆಚ್ಚಗಳ ಬಗ್ಗೆ ಎಚ್ಚರದಿಂದರಬೇಕು. ನಾವು ಕೇವಲ ದೇವಸ್ಥಾನದ ಟ್ರಸ್ಟಿಗಳಾಗಿದ್ದು, ವೆಂಕಟೇಶ್ವರನಿಗೆ ಸೇರಿದ ಒಂದು ರೂಪಾಯಿಯನ್ನೂ ದುರುಪಯೋಗ ಮಾಡುವ ಹಕ್ಕು ನಮಗಿಲ್ಲ. ಪಾರದರ್ಶಕತೆ ಕಾಪಾಡಲು ಆಂತರಿಕ ಲೆಕ್ಕಪರಿಶೋಧನೆ ನಡೆಸುವುದು ಉತ್ತಮ ಎಂದಿದ್ದಾರೆ.