ಹೊಸದಿಗಂತ ಡಿಜಿಟಲ್ ಡೆಸ್ಕ್:
2013ರ ಪಾಟ್ನಾದಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಪಾಟ್ನಾ ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.
ವಿಶೇಷ ಎನ್‍ಐಎ ನ್ಯಾಯಾಲಯದ ಹಿಂದಿನ ತೀರ್ಪನ್ನು ಪರಿಶೀಲಿಸಿ, ಹೈಕೋರ್ಟ್ ನ್ಯಾಯಮೂರ್ತಿ ಅಶುತೋಷ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಅಕ್ಟೋಬರ್ 27, 2013 ರಂದು ಸಂಭವಿಸಿದ ಸರಣಿ ಸ್ಫೋಟಗಳು ವ್ಯಾಪಕ ಭೀತಿಯನ್ನು ಉಂಟುಮಾಡಿತ್ತು. ಹಲವಾರು ಸಾವುನೋವುಗಳಿಗೆ ಕಾರಣವಾಗಿತ್ತು. 2014ರ ಲೋಕಸಭೆ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದ ವೇಳೆ ಪಾಟ್ನಾದ ಗಾಂಧಿ ಮೈದಾನದಲ್ಲಿ ಸ್ಫೋಟ ಸಂಭವಿಸಿತ್ತು. ಅಲ್ಲದೇ ಪಾಟ್ನಾ ರೈಲು ನಿಲ್ದಾಣವನ್ನು ಗುರಿಯಾಗಿಸಿಕೊಂಡು ಸ್ಫೋಟಗೊಳಿಸಲಾಗಿತ್ತು. ಈ ಸ್ಫೋಟದಿಂದ 6 ಜನ ಸಾವನ್ನಪ್ಪಿ, 80 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮೊದಲ ಬಾಂಬ್ ಸ್ಫೋಟ ಪಾಟ್ನಾ ರೈಲು ನಿಲ್ದಾಣದ 10ನೇ ಫ್ಲಾಟ್‍ಫಾರ್ಮ್‍ನಲ್ಲಿ ಸಂಭವಿಸಿತ್ತು. ಇನ್ನುಳಿದ ಸ್ಫೋಟ ಗಾಂಧಿ ಮೈದಾನದಲ್ಲಿ ನಡೆದಿತ್ತು. ಮೋದಿ ಭಾಷಣ ಮಾಡಲಿದ್ದ ಕೆಲವೇ ಕ್ಷಣಗಳ ಮೊದಲು ಬಾಂಬ್ ಸ್ಫೋಟಿಸಲಾಗಿತ್ತು. ಆದರೆ ಮೋದಿ ರ್ಯಾಲಿ ಮುಂದುವರಿಸಿದ್ದರು.
ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಪಾಟ್ನಾ ಪೊಲೀಸರು ಮಾಡಿದ್ದರು. ಬಳಿಕ ಎನ್‍ಐಎಗೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಒಂಬತ್ತು ಆರೋಪಿಗಳನ್ನು ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ನವಾಜ್ ಅನ್ಸಾರಿ, ಮುಜ್ಮುಲ್ಲಾ, ಉಮರ್ ಸಿದ್ದಿಕಿ, ಅಜರ್ ಕುರೇಸಿ, ಅಹ್ಮದ್ ಹುಸೇನ್, ಫಿರೋಜ್ ಅಸ್ಲಾಂ ಮತ್ತು ಇಫ್ತಿಕರ್ ಆಲಂ ಎಂದು ಗುರುತಿಸಲಾಗಿತ್ತು. ಇನ್ನೋರ್ವ ಆರೋಪಿ ಫಕ್ಯುದ್ದೀನ್‍ನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಎನ್‍ಐಎ ಖುಲಾಸೆಗೊಳಿಸಿತ್ತು.
ಶಿಕ್ಷೆಗೊಳಗಾದ ವ್ಯಕ್ತಿಗಳು ಇಂಡಿಯನ್ ಮುಜಾಹಿದ್ದೀನ್ ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ ಸದಸ್ಯರು ಎಂದು ತಿಳಿದು ಬಂದಿದೆ. ಆರೋಪಿಗಳು ಪ್ರಸ್ತುತ ಪಾಟ್ನಾದ ಬ್ಯೂರ್ ಜೈಲಿನಲ್ಲಿದ್ದಾರೆ.