ಸ್ಮಶಾನಭೂಮಿ ಸಮಸ್ಯೆ ಇತ್ಯರ್ಥಪಡಿಸಿ: ಸಚಿವ ಪ್ರಭು ಚವ್ಹಾಣ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಸ್ಮಶಾನಭೂಮಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ತಹಸೀಲ್ದಾರರಿಗೆ ಸೂಚಿಸಿದರು.
ಸೆ.2ರಂದು ಕಮಲನಗರ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಗ್ರಾಮ ಸಂಚಾರದ ವೇಳೆ ಸ್ಮಶಾನಭೂಮಿ ಕುರಿತ ಮನವಿಗಳಿಗೆ ಸ್ಪಂದಿಸಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಚುಂಬುಲೆವಾಡಿ, ಢೋಣಗಾಂವ, ರಂಡ್ಯಾಳ, ಹಕ್ಯಾಳ, ಖತಗಾಂವ, ಕಮಲನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸ್ಮಶಾನಭೂಮಿ ಒದಗಿಸುವಂತೆ ಸಾರ್ವಜನಿಕರು ಸಚಿವರಿಗೆ ಮನವಿ ಸಲ್ಲಿಸಿದರು.
ಸಾಕಷ್ಟು ಗ್ರಾಮಗಳಲ್ಲಿ ಸ್ಮಶಾನಭೂಮಿ ಕುರಿತಂತೆ ದೂರುಗಳು ಬರುತ್ತಿವೆ. ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯನ್ನು ಗುರುತಿಸುವ ಕೆಲಸವಾಗಬೇಕು. ಸ್ಮಶಾನಭೂಮಿ ಕೊರತೆಯಿರುವ ಕಡೆಗಳಲ್ಲಿ ಶೀಘ್ರ ಭೂಮಿ ಒದಗಿಸಿಕೊಡಬೇಕು. ಜಾಗ ಇಲ್ಲದ ಕಡೆಗಳಲ್ಲಿ ನಿಯಮಾನುಸಾರ ಜಮೀನು ಖರೀದಿಸಿಕೊಡಬೇಕು. ಮುಂದಿನ ದಿನಗಳಲ್ಲಿ ಯಾವೊಂದು ಗ್ರಾಮದಲ್ಲಿಯೂ ಸ್ಮಶಾನಭೂಮಿಯ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜನರ ಸಮಸ್ಯೆಗಳನ್ನು ಖುದ್ದಾಗಿ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಯೋಜನೆ ರೂಪಿಸುವ ಉದ್ದೇಶದಿಂದ ಔರಾದ(ಬಿ) ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಗ್ರಾಮ ಸಂಚಾರ ನಡೆಸುತ್ತಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪರಮ ಸಂಕಲ್ಪವಾಗಿದೆ. ಅದರಂತೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಜನತೆಯೂ ಸಹ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕೆಂದು ಸಚಿವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!