ಲೈಂಗಿಕ ದೌರ್ಜನ್ಯ ಆರೋಪ: ಪ್ರತಿಷ್ಟಿತ ಮಠದ ಮಠಾಧೀಶರ ವಿರುದ್ಧ ಪೋಕ್ಸೋ ಕಾಯಿದೆಯಡಿ ದೂರು ದಾಖಲು

ಹೊಸದಿಗಂತ ವರದಿ, ಚಿತ್ರದುರ್ಗ:

ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಚಿತ್ರದುರ್ಗದ ಮಠದ ಪೀಠಾಧಿಪತಿಯ ವಿರುದ್ಧ ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಲಾಗಿದೆ. ಮಠದಲ್ಲೇ ಇರುವ ವಿದ್ಯಾರ್ಥಿನಿಲಯದಲ್ಲಿನ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮೇಲೆ ಪೀಠಾಧಿಪತಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಠದ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಪೀಠಾಧಿಪತಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಳೆದ ಮೂರೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂದು ದೂರಿದನಲ್ಲಿ ಆಪಾದಿಸಲಾಗಿದೆ.
ಪ್ರಕರಣದಲ್ಲಿ ಪೀಠಾಧಿಪತಿ, ಹಾಸ್ಟೆಲ್ ವಾರ್ಡನ್ ಸೇರಿದಂತೆ ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಿದ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೀಠಾಧಿಪತಿ ಅವರಿಗೆ ಹಣ್ಣು ನೀಡಲು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರನ್ನು ಕಳಿಸಲಾಗುತ್ತಿತ್ತು. ಬಳಿಕ ಪೀಠಾಧಿಪತಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಇದಕ್ಕೆ ಹಾಸ್ಟೆಲ್ ವಾರ್ಡನ್ ಸೇರಿದಂತೆ ಇತರೆ ನಾಲ್ಕು ಜನರು ಸಹಕಾರ ನೀಡುತ್ತಿದ್ದರು ಎನ್ನಲಾಗಿದೆ.
ಈ ಕುರಿತು ನೊಂದ ಇಬ್ಬರು ಬಾಲಕಿಯರು ಮೈಸೂರಿನ ಒಡನಾಡಿ ಸಂಸ್ಥೆಯ ಮೊರೆ ಹೋಗಿದ್ದಾರೆ. ವಿಷಯ ತಿಳಿದ ಒಡನಾಡಿ ಸಂಸ್ಥೆಯವರು ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಕ್ಕಳನ್ನು ಹಾಜರುಪಡಿಸಿದ್ದಾರೆ. ಮಕ್ಕಳಿಂದ ಹೇಳಿಕೆ ಪಡೆದ ಮಕ್ಕಳ ಕಲ್ಯಾಣ ಸಮಿತಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೀಠಾಧಿಪತಿ ಹಾಗೂ ಇತರೆ ನಾಲ್ವರ ವಿರುದ್ಧ ಪೊಲೀಸರು ಎಫ್‌ಐಆರ್ ಸಿದ್ಧಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಚಿತ್ರದುರ್ಗಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜನಪ್ರತಿನಿಧಿ ಹಾಗೂ ಅವರ ಪತ್ನಿಯ ವಿರುದ್ಧ ಹಾಸ್ಟೆಲ್ ವಾರ್ಡನ್ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ ಎನ್ನಲಾಗಿಎ. ಈ ಕುರಿತು ಸಾರ್ವಜನಿಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಜನರು ಪರಸ್ಪರ ಚರ್ಚೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!