ಸಬರಮತಿ ಆಶ್ರಮದಲ್ಲಿ 7500 ಜನರಿಂದ ಚರಕ ತಿರುಗಿಸಿ ವಿಶ್ವದಾಖಲೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಗುಜರಾತ್​ನ ಸಬರಮತಿ ಆಶ್ರಮದಲ್ಲಿ ಆಯೋಜನೆಗೊಂಡಿದ್ದ ಖಾದಿ ಉತ್ಸವ ಸಮಾರಂಭದಲ್ಲಿ ಒಟ್ಟಿಗೆ ದಾಖಲೆಯ 7500 ಚರಕ ತಿರುಗಿಸಿ ಈ ವಿಶ್ವದಾಖಲೆ ನಿರ್ಮಾಣ ಮಾಡಲಾಗಿದೆ. ಅದರಲ್ಲೂ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ಮಹತ್ವದ ರೆಕಾರ್ಡ್​​ ಮೂಡಿ ಬಂದಿದೆ.

ಪ್ರಧಾನಿ ಮೋದಿ ಸಮ್ಮುಖದಲ್ಲಿ ಸಬರಮತಿ ನದಿಯ ಮುಂಭಾಗದಲ್ಲಿ7500 ಚರಕಗಳನ್ನು ತಿರುಗಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.

ಗುಜರಾತ್ ರಾಜ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕುಶಲಕರ್ಮಿಗಳಿಗೆ ಒಂದು ದಿನದ ವೇತನ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಖಾದಿಗಳತ್ತ ಹೆಚ್ಚಿನ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಪುಷ್ಠಿ ನೀಡುವ ಉದ್ದೇಶದಿಂದ ಖಾದಿ ಗ್ರಾಮ ಉದ್ಯೋಗ ಮಂಡಳಿ ಈ ನಿರ್ಧಾರ ಕೈಗೊಂಡಿತ್ತು.

ಸ್ವಾತಂತ್ರ್ಯೋತ್ಸವ 75ನೇ ವರ್ಷದ ಸಂದರ್ಭದಲ್ಲಿ 7500 ಮಹಿಳೆಯರು ಚರಕ ನೂಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಚರಕ ನೂಲುವುದು ನನ್ನನ್ನು ಬಾಲ್ಯದ ದಿನಗಳಿಗೆ ಕರೆದೊಯ್ದಿದೆ ಎಂದರು.

ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಗಾಂಧೀಜಿಯವರು ಖಾದಿ ನೂಲುವುದನ್ನು ದೇಶದ ಸ್ವಾಭಿಮಾನದ ಸಂಕೇತವಾಗಿ ಮಾಡಿದರು. ಆದರೆ, ಸ್ವಾತಂತ್ರ್ಯದ ನಂತರ ಇದನ್ನು ಕೀಳು ಭಾವನೆಯಿಂದ ನೋಡಲಾಯಿತು. ಹೀಗಾಗಿ, ಖಾದಿ ಉದ್ಯೋಗ ಸಂಪೂರ್ಣವಾಗಿ ನಾಶವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಆದರೆ, ಇತ್ತೀಚಿನ ದಿನಗಳಲ್ಲಿ ಖಾದಿ ಭಾರತವನ್ನ ಅಭಿವೃದ್ಧಿ ಮತ್ತು ಸ್ವಾವಲಂಬಿಯಾಗಿಸಲು ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!