July 13, 2026
Monday, July 13, 2026
spot_img

ಲೈಂಗಿಕ ಕಿರುಕುಳ ಪ್ರಕರಣ: ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್‌ ಮಹತ್ವದ ನೊಟೀಸ್‌ ಜಾರಿಗೆ ಮಾಡಿದೆ.

ಕರ್ನಾಟಕ ಹೈಕೋರ್ಟ್ ಈ ಹಿಂದೆ ರೇವಣ್ಣ ಅವರಿಗೆ ನೀಡಿದ್ದ ದೋಷಮುಕ್ತ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ನ್ಯಾಯಮೂರ್ತಿ ಪರ್ದಿವಾಲಾ, ಕೆ.ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠವು ಈ ನೋಟಿಸ್ ಹೊರಡಿಸಿದ್ದು, ಹೈಕೋರ್ಟ್‌ನ ನಡಾವಳಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹೊಳೆನರಸೀಪುರದ ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣಕದಲ್ಲಿ ರೇವಣ್ಣ ಹಾಗೂ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದು, ಆತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆಗಳು ನಡೆಯುತ್ತಿವೆ. ಇದೇ ಪ್ರಕರಣದಲ್ಲಿ ಹೆಚ್​ಡಿ ರೇವಣ್ಣ ಅವರನ್ನೂ ಕೂಡ ಬಂಧಿಸಲಾಗಿತ್ತು. ಮನೆಗೆಲಸದಾಕೆಗೆ ತೀವ್ರ ಕಿರುಕುಳ ನೀಡಲಾಗಿತ್ತು ಮತ್ತು ಆಕೆಯ ಘನತೆಗೆ ಧಕ್ಕೆ ತರಲಾಗಿತ್ತು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ನಂತರ ಹೆಚ್​​ಡಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಲು ಕೋರಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ, ಹೈಕೋರ್ಟ್ ಐಪಿಸಿ ಸೆಕ್ಷನ್ 354 ಅನ್ನು ರೇವಣ್ಣ ವಿರುದ್ಧದ ಪ್ರಕರಣದಿಂದ ಕೈಬಿಟ್ಟು, ಸೆಕ್ಷನ್ 354ಎ ಅಡಿ ಪ್ರಾಸಿಕ್ಯೂಷನ್ ಅನ್ನು ಮುಂದುವರಿಸಲು ಕೆಳ ನ್ಯಾಯಾಲಯಕ್ಕೆ ಆದೇಶ ನೀಡಿತ್ತು.

ಹೈಕೋರ್ಟ್‌ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಒಂದು ಪ್ರಕರಣದಲ್ಲಿ ಆರೋಪದಿಂದ ಮುಕ್ತಗೊಳಿಸಿದ್ದಕ್ಕೆ ಮತ್ತು ಒಂದು ಸೆಕ್ಷನ್ ಅನ್ನು ಕೈಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರವು ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿತು. ‘ಹೈಕೋರ್ಟ್ ಆರೋಪವನ್ನು ಹೇಗೆ ಬದಲಾಯಿಸಲು ಸಾಧ್ಯ’ ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !