ʼಕಾಶ್ಮೀರಿ ಫೈಲ್ಸ್‌ʼ ಬಗ್ಗೆ ಶಶಿ ತರೂರ್ ವಿವಾದಾತ್ಮಕ ಟ್ವಿಟ್;‌ ತಿರುಗೇಟು ನೀಡಿದ ನಟ ಅನುಪಮ್ ಖೇರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಮಾಡಿದ ಟ್ವೀಟ್ ಬಾರೀ ವಿವಾದಕ್ಕೆ ಕಾರಣವಾಗಿದೆ. ನ್ಯೂಸ್ ಚಾನೆಲ್ ಒಂದರಲ್ಲಿ ಪ್ರಕಟವಾಗಿದ್ದ ವರದಿಯನ್ನು ಲಿಂಕ್ ಮಾಡಿ, ಟ್ವಿಟ್‌ ಮಾಡಿದ್ದ ತರೂರ್‌ ಭಾರತದ ಆಡಳಿತ ಪಕ್ಷದ ಪ್ರಯೋಜಿತ ಸಿನೆಮಾ ‘ದಿ ಕಾಶ್ಮೀರ್ ಫೈಲ್ಸ್’ನ್ನು ಸಿಂಗಾಪುರ ದೇಶದಲ್ಲಿ ಬ್ಯಾನ್‌ ಮಾಡಲಾಗಿದೆ ಎಂದು ಬರೆದುಕೊಂಡಿದ್ದರು. ಈ ಟ್ವಿಟ್‌ ಗೆ ಎಲ್ಲೆಡೆಯಿಂದ ಟೀಕೆಗಳು ಕೇಳಿಬರುತ್ತಿವೆ.

ಚಿತ್ರದಲ್ಲಿ ನಟಿಸಿರುವ ನಟ ಅನುಪಮ್ ಖೇರ್ ತರೂರ್‌ ಟ್ವಿಟ್‌ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರೂರು ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ಅವರ 2013 ರ ಟ್ವಿಟ್ ಒಂದನ್ನು ಹಂಚಿಕೊಂಡಿರುವ ಖೇರ್‌, ಮೂಲತಃ ಕಾಶ್ಮೀರದವರಾಗಿದ್ದ ಪತ್ನಿ ಸುನಂದಾ ಅವರಿಗೋಸ್ಕರವಾದರೂ ಶಶಿ ತರೂರ್‌ ಕಾಶ್ಮೀರಿ ಪಂಡಿತರ ವಿಚಾರದಲ್ಲಿಸಂವೇದನಾಶೀಲತೆ ತೋರಬೇಕಿತ್ತು. ಯಾವುದೋ ದೇಶದಲ್ಲಿ ಚಿತ್ರ ಬ್ಯಾನ್‌ ಆಗಿದ್ದನ್ನು ದೊಡ್ಡ ಸಾಧನೆಯ ರೀತಿಯಲ್ಲಿ ಹಂಚಿಕೊಳ್ಳಬಾರದಾಗಿತ್ತು ಎಂದು ಖಾರವಾಗಿ ಟ್ವಿಟ್‌ ಮಾಡಿದ್ದರು. ಈ ವಿಚಾರವಾಗಿ ತರೂರ್‌ ಹಾಗೂ ಖೇರ್‌ ನಡುವೆ ಟ್ವಿಟ್‌ ಸಮರ ನಡೆಯುತ್ತಿದೆ.

“ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಗಲಭೆಯಿಂದ ಸಮಸ್ಯೆಗಳನ್ನು ಅನುಭವಿಸಿದವರಿಗೆ ಸಾಕಷ್ಟು ಪರಿಹಾರ ನೀಡಲಾಗುತ್ತಿದೆ. ಆದರೆ 1989 ರಲ್ಲಿ ನಾನಾ ಕಷ್ಟಗಳನ್ನು ಅನುಭವಿಸಿದ ಕಾಶ್ಮೀರಿಗಳನ್ನು ಭೂಮಿಯ ಮೇಲೆ ಏಕೆ ನಿರ್ಲಕ್ಷಿಸಲಾಗಿದೆ,” ಎಂದು ಸುನಂದಾ ಪುಷ್ಕರ್ ಮಾಡಿದ್ದ ಟ್ವಿಟ್‌ ನ ಸ್ಕ್ರೀನ್‌ ಶಾಟ್‌ ಗಳನ್ನು ಖೇರ್‌ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಉತ್ತರಿಸಿರುವ ತರೂರ್, ನಾನು ಸಿನಿಮಾ ಬಗ್ಗೆ ಯಾವುದೇ ಕಾಮೆಂಟ್ ಸೇರಿಸದೆ ವರದಿಯಾದ ಸುದ್ದಿಯನ್ನು ಮಾತ್ರ ಪೋಸ್ಟ್ ಮಾಡಿದ್ದೇನೆ. ಕಾಶ್ಮೀರಿ ಪಂಡಿತರ ನೋವನ್ನು ಅಪಹಾಸ್ಯ ಮಾಡಿಲ್ಲ ಅಥವಾ ಅವಹೇಳನ ಮಾಡಿಲ್ಲ ವಾಸ್ತವ ಸುದ್ದಿಯನ್ನು ಮಾತ್ರ ಹಂಚಿಕೊಂಡಿದ್ದೇನೆ. ಈ ವಿಚಾರದಲ್ಲಿ ವಿನಾಕಾರಣ ನನ್ನ ದಿವಗಂತ ಪತ್ನಿಯನ್ನು ಎಳೆದು ತಂದಿರುವುದು ಅವರ ನಿರ್ಲಜ್ಜೆತನ ತೋರಿಸುತ್ತದೆ ಎಂದು ಖೇರ್‌ ಹೆಸರು ಹೇಳದೆ ತರೂರ್ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!